ಬೀದರ್: ‘ದೇಶದ ಪ್ರಗತಿಗೆ ಸಹಕಾರ ಕ್ಷೇತ್ರದ ಕೊಡುಗೆ ಅಪೂರ್ವ, ಅಮೋಘವಾದುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಇತರೆ ಸಹಕಾರ ಸಂಘಗಳ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಬಡತನ, ಅನಕ್ಷರತೆ ಇತ್ತು. ಆದರೆ, ಸಹಕಾರ ಕ್ಷೇತ್ರದಿಂದ ದೇಶ ವಿಕಾಸ ಪಥದತ್ತ ಮುನ್ನಡೆಯುತ್ತಿದೆ. ಆರ್ಥಿಕವಾಗಿ ಇಂದು ಬಲಿಷ್ಠವಾಗಿ ಬೆಳೆದಿದ್ದೇವೆ. ಇದಕ್ಕೆ ಸಹಕಾರ ಕ್ಷೇತ್ರವೇ ಕಾರಣ. ಹಾಲು ಉತ್ಪಾದಕರ ಸಂಘ ಸಹಕಾರ, ಗೃಹ ನಿರ್ಮಾಣ ಸಹಕಾರ ಸಂಘ, ಸಹಕಾರ ಸಕ್ಕರೆ ಕಾರ್ಖಾನೆ, ಕೇಂದ್ರ ಸಹಕಾರ ಬ್ಯಾಂಕ್, ಕೃಷಿ ಪತ್ತಿನ ಬ್ಯಾಂಕ್ ಹೀಗೆ ಹಲವು ಕ್ಷೇತ್ರಗಳಲ್ಲಿ ಸಹಕಾರ ರಂಗ ಕೆಲಸ ಮಾಡುತ್ತಿದೆ. ಹಿಂದೆ ಮಹಿಳೆಯರು ಹೊರಗೆ ಬರುತ್ತಿರಲಿಲ್ಲ. ಆದರೆ, ಈಗ ಮಹಿಳಾ ಸ್ತ್ರೀಶಕ್ತಿ ಸಂಘಗಳು ಹುಟ್ಟಿಕೊಂಡಿವೆ. ಹಣಕಾಸು ವಹಿವಾಟಿನ ಅರಿವು ಮಹಿಳೆಯರಿಗೆ ಬಂದಿದೆ ಎಂದು ಹೇಳಿದರು.
ಭೀಮಣ್ಣ ಖಂಡ್ರೆ, ಸಿದ್ದಪ್ಪ ಖೇಳಗಿ, ಬಸವರಾಜ ಬಿರಾದಾರ, ಖೇಣಿ, ಗುರುಪಾದಪ್ಪ ನಾಗಮಾರಪಳ್ಳಿ, ವೀರಶೆಟ್ಟಿ ಕುಶನೂರ ಸೇರಿದಂತೆ ಹಲವರು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಸಹಕಾರಿ ಕ್ಷೇತ್ರ ಬರುವ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಿ ಬೆಳೆಯಬೇಕು. ಮದ್ಯವರ್ತಿಗಳಿಂದ ದುರ್ಬಳಕೆ ಆಗಬಾರದು. ಸಾಲ ಮರುಪಾವತಿಯಲ್ಲಿ ಉತ್ತಮ ಪ್ರಗತಿ ಸಾಧಿಸಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಸೇವಾ ಸೌಲಭ್ಯ ಜನರಿಗೆ ಕೊಟ್ಟು ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಬರುವ ದಿನಗಳಲ್ಲಿ ಸಹಕಾರ ಸಂಘಗಳು ಉಳಿಯುತ್ತವೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ನಾನು ಬಿಎಸ್‌ಎಸ್‌ಕೆ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವಾಗ ಕಾರ್ಖಾನೆ ಮೇಲೆ ₹28 ಕೋಟಿ ಸಾಲ ಇತ್ತು. ಅದೀಗ ₹300 ಕೋಟಿ ಸಾಲವಾಗಿದೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಹಾಗೂ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ) ಎರಡೂ ಉಳಿಯಬೇಕು. ಎರಡೂ ಕಟ್ಟಿ ಬೆಳೆಸಿದ್ದು ರೈತರೇ. ಬ್ಯಾಂಕುಗಳು ಸಾಲ ಕೊಟ್ಟಾಗ ರೈತರು ಸಕಾಲಕ್ಕೆ ಮರುಪಾವತಿಸಬೇಕು. ಬರುವ ದಿನಗಳಲ್ಲಿ ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಸರ್ಕಾರದಿಂದ ಅಗತ್ಯ ಕ್ರಮ ಜರುಗಿಸಲಾಗುವುದು. ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಸಹಕಾರ ಕ್ಷೇತ್ರದ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಸಹಕಾರ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸಹಕಾರಿಗಳಿಂದ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಡಾ. ಸಿದ್ದಲಿಂಗಪ್ಪ ಎಸ್. ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರಕುಮಾರ್ ಖಂಡ್ರೆ, ಉಪಾಧ್ಯಕ್ಷ ಅಭಿಷೇಕ ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪರಮೇಶ್ವರ ಮುಗುಟೆ, ಗಾಂಧಿಗಂಜ್ ಸಹಕಾರ ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಸಹಕಾರ ಇಲಾಖೆಯ ಜಂಟಿ ನಿರ್ದೇಶಕ ಮಹೇಶ, ಕಲಬುರಗಿ ಪ್ರಾಂತೀಯ ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ್ ಮಲ್ಕೂಡ, ಸಹಕಾರ ಸಂಘಗಳ ಉಪನಿಬಂಧಕಿಯೂ ಆದ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಎಸ್., ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಆರ್ ಮಲ್ಲಮ್ಮ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ. ರಾಜು, ನಿರ್ದೇಶಕ ಶೇಖರಗೌಡ ಮಾಲಿಪಾಟೀಲ, ಜೆ.ಎಂ. ಶಿವಪ್ರಸಾದ್, ಕರ್ನಾಟಕ ರಾಜ್ಯ ಬಸವೇಶ್ವರ ಸುದ್ದಿ ಮಾಧ್ಯಮ ಸಹಕಾರ ಮಹಾಮಂಡಳಿ ಅಧ್ಯಕ್ಷ ಗುರುನಾಥ ಜ್ಯಾಂತಿಕರ್, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಮಾಜಿಶಾಸಕ ಸುಭಾಷ ಕಲ್ಲೂರ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.