ಔರಾದ್: ತಾಲ್ಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ ₹560.70 ಕೋಟಿ ಮೊತ್ತದ ಕಾಮಗಾರಿ ಟೆಂಡರ್ ರದ್ದುಪಡಿಸಿರುವ ಮಾಹಿತಿ ಇದ್ದು, ಈ ಬಗ್ಗೆ ಶೀಘ್ರದಲ್ಲಿ ಹೋರಾಟ ಮಾಡುವುದಾಗಿ ಶಾಸಕ ಪ್ರಭು ಚವಾಣ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ‘ರೈತರ ಈ ಮಹತ್ವಾಕಾಂಕ್ಷಿ ಯೋಜನೆಗೆ ಅನುಮೋದನೆ ದೊರೆತು ಎರಡು ವರ್ಷ ಆದರೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿಗಳು ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಟೆಂಡರ್ ರದ್ದು ಮಾಡುವುದಾಗಲಿ ಇಲ್ಲವೇ ವಿನಾ ಕಾರಣ ಕಾಮಗಾರಿ ವಿಳಂಬ ಮಾಡುವುದು ಕಂಡು ಬಂದರೆ ತಾಲ್ಲೂಕಿನ ರೈತರ ಜತೆ ಸೇರಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ನೀರಿನ ಕೊರತೆಯಾಗಿ ಜನ ಜಾನುವಾರುಗಳಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಈ ಯೋಜನೆ ಜಾರಿಯಿಂದ ತಾಲ್ಲೂಕಿನ ಹಾಲಹಳ್ಳಿ ಬ್ಯಾರೇಜ್ ಬಳಿ ಮಾಂಜ್ರಾ ನದಿಯಿಂದ 0.95 ಟಿಎಂಸಿ ನೀರನ್ನೆತ್ತಿ 36 ಕೆರೆಗಳಿಗೆ ತುಂಬಿಸಲು ಅನುಕೂಲವಾಗಲಿದೆ. ಇದರಿಂದ 8,188 ಹೆಕ್ಟೇರ್ ಪ್ರದೇಶಕ್ಕೂ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.