ಕಮಲನಗರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಔರಾದ(ಬಿ) ಶಾಸಕ ಪ್ರಭು.ಬಿ ಚವ್ಹಾಣ ಭೇಟಿ ನೀಡಿ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿರುವ ವೈದ್ಯರ ಪೈಕಿ ಕೆಲವರು ಮಾತ್ರ ಹಾಜರಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಅನಧಿಕೃತವಾಗಿ ಗೈರಾಗುತ್ತಿರುವ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ನಂತರ ಆಸ್ಪತ್ರೆಯ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ, ರೋಗಿಗಳ ಆರೋಗ್ಯ ಕುರಿತು ವಿಚಾರಿಸಿದರು. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಬಡ ಜನತೆ ಬರುವುದರಿಂದ ಅವರೊಂದಿಗೆ ಎಲ್ಲ ಸಿಬ್ಬಂದಿಗಳು ಸೌಜನ್ಯತೆಯಿಂದ ವ್ಯವಹರಿಸಬೇಕು. ಅವರಿಗೆ ಯಾವುದೆ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಎಂದರು.
ಎಕ್ಸರೇ ವಿಭಾಗದಲ್ಲಿ ತಜ್ಞರು ಲಭ್ಯ ಇಲ್ಲದಿರುವುದನ್ನು ಕಂಡು ತೀವ್ರ ಬೇಸರ ವ್ಯಕ್ತಪಡಿಸಿ, ಉತ್ತಮ ಕೋಣೆ ಹಾಗೂ ಯಂತ್ರ ಲಭ್ಯವಿದೆಯಾದರೂ ತಜ್ಞ ಸಿಬ್ಬಂದಿ ಲಭ್ಯವಿಲ್ಲ. ಎಕ್ಸರೇ ನಿರ್ವಹಣೆಗೆ ಹೊಸ ಸಿಬ್ಬಂದಿಯನ್ನು ನಿಯೋಜಿಸುವಂತೆ ಡಿಎಚ್‌ಒಗೆ ಸೂಚಿಸಿದರು.
ಮುಖಂಡರಾದ ದೊಂಢಿಬಾ ನರೋಟೆ, ಪ್ರವೀಣ ಕಾರಬಾರಿ, ಶಿವಕುಮಾರ ವಡ್ಡೆ, ನಾಗೇಶ ಪತ್ರೆ, ರಾಜು ಅಲಬಿದೆ, ಸಚಿನ ರಾಠೋಡ್, ರಾಜು ಶೆಳ್ಕೆ, ಸಂಜು ಮುರ್ಕೆ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.