ಬೀದರ್: ‘ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾಲಮಿತಿಯಲ್ಲಿ ಅವರಿಗೆ ಬ್ಯಾಂಕ್ ಸಾಲು ತೀರಿಸಲು ಆಗುವುದಿಲ್ಲ. ಸರ್ಕಾರ ಅವರಿಗೆ ಹೆಚ್ಚಿನ ಕಾಲಾವಕಾಶ ಕೊಡಬೇಕು’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ‘ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಬರಗಾಲದ’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬ್ಯಾಂಕ್ ಸಾಲ ಮರು ಪಾವತಿಸಬೇಕು ಎಂದು ಬ್ಯಾಂಕ್‌ನವರು ಡಿಸಿಸಿ ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ಖಾಸಗಿಯವರ ಬಳಿಯೂ ರೈತರು ಸಾಲ ಪಡೆದಿದ್ದಾರೆ. ಅವರು ತೊಂದರೆ ನೀಡುತ್ತಿದ್ದಾರೆ. ಬರಗಾಲದಿಂದ ರೈತರು ಸಾಲ ತೀರಿಸುವ ಸ್ಥಿತಿಯಲ್ಲಿ ಸದ್ಯಕ್ಕಿಲ್ಲ. ಅವರಿಗೆ ಹೆಚ್ಚಿನ ಕಾಲಾವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಕರ್ನಾಟಕಕ್ಕೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಎಲ್ಲ ಕ್ಷೇತ್ರಗಳಿಗೂ ಸಮಾನ ಅನುದಾನ ನೀಡಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆ ಕುರಿತು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಆಗ್ರಹಿಸಿದರು.
‘ಹೆಣ್ಣು ಭ್ರೂಣ ಹತ್ಯೆ ಬಹಳ ಕಳವಳಕಾರಿ ವಿಷಯ. ಹೆಣ್ಣು ಭ್ರೂಣ ಹತ್ಯೆಯಂತಹ ಗಂಭೀರ ಕೃತ್ಯ ಎಸಗುತ್ತಿರುವವರ ಮಾಹಿತಿ ಕಲೆ ಹಾಕಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರ ಮುಂದಾಗಬೇಕು’ ಎಂದು ಶಾಸಕ ಬೆಲ್ದಾಳೆ ಒತ್ತಾಯಿಸಿದರು.
ದೇಶದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನಮಾನ, ಗೌರವವಿದೆ. ‘ಭಾರತ ಮಾತಾಕೀ ಜೈ’ ಎಂದು ಘೋಷಣೆ ಹಾಕುತ್ತೇವೆ. ಸಮಾಜದಲ್ಲಿ ಹೆಣ್ಣು ಹುಟ್ಟುವ ಮೊದಲೇ ಹತ್ಯೆ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದರ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು. ತಪ್ಪು ಮಾಡುತ್ತಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆರೋಗ್ಯ ಸಚಿವರನ್ನು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.