ಚಿಟಗುಪ್ಪ: ಹಿಂದೂ–ಮುಸ್ಲಿಂ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಮುಸ್ಲಿಮರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕೆಲವರು ಪೀರ್ ಮೆರವಣಿಗೆ ನಡೆಸಿ, ಭಕ್ತಿ ಅರ್ಪಿಸಿದರು. ರಸ್ತೆಗಳಲ್ಲಿ ಯುವಕರು ಷರಬತ್ ವಿತರಣೆ ಮಾಡುವ ಮೂಲಕ ಭಕ್ತಿಯಲ್ಲಿ ಮಿಂದರು. ಮನೆಯಲ್ಲಿ ಮಧ್ಯಾಹ್ನ ಸಿಹಿ ತಿನಿಸು ಮಾಡುವ ಮೂಲಕ ಹಬ್ಬ ಆಚರಿಸಿದರು.
ಹಬ್ಬದ ಹಿಂದಿನ ದಿನದ ಮಧ್ಯ ರಾತ್ರಿಯಿಂದಲೇ ಗ್ರಾಮಸ್ಥರು, ಜಾತಿ ಭೇದವಿಲ್ಲದೇ ಇಸ್ಲಾಂ ಪದ್ಧತಿಗೆ ಅನುಗುಣವಾಗಿ ಭುಲಾಯಿ ಹಾಡು ಹಾಡುತ್ತ ಪೀರ್ ಮೆರವಣಿಗೆಯ ಸಿಂಗಾರ ನಡೆಸಿದರು.
ತಾಲ್ಲೂಕಿನ ನಿರ್ಣಾ, ಮುತ್ತಂಗಿ, ತಾಳಮಡಗಿ, ನಾಗನಕೇರಾ, ಶಾಮತಾಬಾದ್, ಬನ್ನಳ್ಳಿ, ಮನ್ನಾ ಎಖ್ಖೇಳಿ, ಚಾಂಗಲೇರಾ, ಕರಕನಳ್ಳಿ, ಕುಡಂಬಲ, ಮೀನಕೇರಾ ಗ್ರಾಮಗಳಲ್ಲಿ ಮನೆಗಳ ಮುಂದೆ ಪೀರ್ ಮೆರವಣಿಗೆ ಬಂದಾಗ ಹಿಂದು–ಮುಸ್ಲಿಂ ಸಮುದಾಯದ ಜನರು ಬೆಲ್ಲ, ಊದು ಬತ್ತಿ ಅರ್ಪಿಸಿ ಭಕ್ತಿ ಸೇವೆ ಸಲ್ಲಿಸಿದರು.
ನಿರ್ಣಾ ಮತ್ತು ಮುತ್ತಂಗಿ ಎರಡೂ ಗ್ರಾಮಗಳಲ್ಲಿಯ ಹುಸೇನ್ ಬಾಶಾ ಪೀರ್‌ಗಳು ದಿನಕ್ಕೆ ಒಬ್ಬರಂತೆ ಎರಡೂ ಗ್ರಾಮಗಳಿಗೆ ಮೆರವಣಿಗೆ ಮೂಲಕ ಹೋಗಿ ಅಲ್ಲಿಯ ಪೀರ್‌ಗಳಿಗೆ ನಮಿಸಿ ಗ್ರಾಮಗಳ ಭಾವೈಕ್ಯತೆ ಸಂದೇಶ ಸಾರಿದ್ದು ವಿಶೇಷವಾಗಿತ್ತು.
ಶಾಮತಾಬಾದ್ ಗ್ರಾಮದಲ್ಲಿ ಪೀರ್ ಮೆರವಣಿಗೆಯಲ್ಲಿ ಹುಲಿ ವೇಷಧಾರಿಗಳು, ಕಪ್ಪು ಬಣ್ಣ ಬಳಿದುಕೊಂಡು ಹರಕೆ ಅರ್ಪಿಸಿದರು. ಮಕ್ಕಳು ತಮಟೆ ವಾದ್ಯಕ್ಕೆ ತಕ್ಕಂತೆ ನರ್ತಿಸಿದರು.
ಚನ್ನಬಸಪ್ಪ ಪಾಟೀಲ, ಹಣಮಂತರಾವ್ ಪಾಟೀಲ, ಅಸದ್ ಪಟೇಲ್, ಬಾಬುರಾವ್ ಕುಲಕರ್ಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಣಿಕ ಬಾಯಿ, ಶೇಕ್ ಮೈನೋದ್ದೀನ್, ದಯಾನಂದ ಮುಕುಂದ ಬಾಯಿ, ಚಂದ್ರಕಾಂತ ಬೈರನಳ್ಳಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.