ಘೋಡವಾಡಿ (ಹುಮನಾಬಾದ್): ಗ್ರಾಮದಲ್ಲಿ ಮಂಗವೊಂದು ಜನರ ಮೇಲೆ ದಾಳಿ ನಡೆಸಿದೆ. 8 ಜನ ಗಾಯಗೊಂಡಿದ್ದಾರೆ.
‘ಕಳೆದ ನಾಲ್ಕು ದಿನಗಳಿಂದ ಈ ಮಂಗ ಜನರಿಗೆ ಕಾಟ ಕೊಡುತ್ತಿದೆ. ಮಕ್ಕಳು ಸೇರಿ ಹಿರಿಯರನ್ನು ಸಹ ಬೆನ್ನಟ್ಟಿ ಅವರ ಮೇಲೆ ದಾಳಿ ಮಾಡುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಏಕಾಏಕಿ ದಾಳಿ ಮಾಡಿ ಕಚ್ಚುತ್ತಿದೆ’ ಎಂದು ದಾಳಿಯಲ್ಲಿ ಗಾಯಗೊಂಡ ಗ್ರಾಮ ಪಂಚಾಯಿತಿ ಸದಸ್ಯ ತಾನಾಜೀ ತಿಳಿಸಿದರು.
ಗ್ರಾಮದಲ್ಲಿ ಮಂಗಕ್ಕೆ ಹೆದರಿ ಜನ ಮನೆಗಳಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರು ಮತ್ತು ರೈತರು ಹೊಲಗಳಿಗೆ ತೆರಳಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಬೇಗ ಮಂಗ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
‘ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಗ್ರಾಮಸ್ಥರ ಮೇಲೆ ಮಂಗ ದಾಳಿ ನಡೆಸುತ್ತಿದೆ. ಅರಣ್ಯಾಕಾರಿಗಳಿಗೆ ಮಂಗ ಸೆರೆ ಹಿಡಿಯುವಂತೆ ಮನವಿ ಮಾಡುತ್ತೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ ಬುಳ್ಳ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದತ್ತು ಕಾಳೆ ಹಾಗೂ ಪಿಡಿಒ ರಾಜಶೇಖರ,‘ಮಂಗಕ್ಕೆ ಹುಚ್ಚು ಹಿಡಿದು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿದೆ’ ಎಂದು ಹೇಳಿದರು.
‘ಅದು ಹುಚ್ಚು ಮಂಗ ಅಲ್ಲ. ದೇಹದ ಮೇಲೆ ಗಾಯಗಳಾಗಿದ್ದರೆ ಆ ರೀತಿ ವರ್ತನೆ ಮಾಡಿ ಜನರ ಮೇಲೆ ದಾಳಿ ಮಾಡುತ್ತದೆ. ಆದಷ್ಟು ಬೇಗ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತೇನೆ’ ಎಂದು ಅರಣ್ಯಾಧಿಕಾರಿ ಬಸವರಾಜ ಢಾಂಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.