ಚಿಟಗುಪ್ಪ: ಪಟ್ಟಣ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರು ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ಮನೆಯ ಅಂಗಳದಲ್ಲಿ ಮಾಳಿಗೆ ಮೇಲೆ ತಂಡೋಪತಂಡವಾಗಿ ಬರುವ ಮಂಗಗಳು ಕಣ್ಣಿಗೆ ಕಂಡಿದ್ದು ಕಿತ್ತುಕೊಂಡು ತಿನ್ನುತ್ತಿವೆ.
ಮಕ್ಕಳು, ಮಹಿಳೆಯರಿಗೆ ಹೆದರಿಕೆ ಉಂಟು ಮಾಡುತ್ತಿವೆ. ಮನೆಯ ಒಳಗಡೆಯೂ ನುಗ್ಗುತ್ತಿವೆ. ಹೀಗಾಗಿ ಹೆದರಿಕೆಯಾಗುತ್ತಿದೆ, ಅರಣ್ಯ ಇಲಾಖೆ ಸಿಬ್ಬಂದಿ ಮಂಗಗಳನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಬೇಕು ಎಂದು ಪಟ್ಟಣದ ಗಜಾನನ್ ವಿಶ್ವಕರ್ಮ ತಿಳಿಸುತ್ತಾರೆ.
ಮಕ್ಕಳು ಮುಂಜಾನೆ ಶಾಲೆಗೆ ಹೋಗುವುದಕ್ಕೂ ಹೆದರುತ್ತಿದ್ದಾರೆ. ರಸ್ತೆಯ ಮೇಲೆ ಎಲ್ಲೆಂದರಲ್ಲಿ ಗುಂಪಾಗಿ ಕುಳಿತುಕೊಳ್ಳುತ್ತಿರುವ ಮಂಗಗಳಿಗೆ ಹೆದರುವಂತಾಗಿದೆ. ರಸ್ತೆಯ ಮೇಲೆ ದ್ವಿಚಕ್ರ ಸವಾರರು ಸಂಚರಿಸುವುದಕ್ಕೂ ಕಷ್ಟವಾಗುತ್ತಿದೆ. ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಮಂಗಗಳು ಜಿಗಿಯುತ್ತ ಬರುವುದರಿಂದ ಹಲವರು ಬೈಕ್‌ನಿಂದ ಬಿದ್ದಿದ್ದು, ಗಾಯಗಳು ಆಗಿವೆ. ತಾಲ್ಲೂಕಿನ ನಿರ್ಣಾ, ಮುತ್ತಂಗಿ ಗ್ರಾಮಗಳಲ್ಲೂ ಇದೆ ಪರಿಸ್ಥಿತಿ ಇದೆ. ಗ್ರಾಮದ ಮೊಬೈಲ್ ಟವರ್ ಮೇಲೆಯೇ ರಾತ್ರಿ ಕಳೆಯುವ ಮಂಗಗಳು ಹಗಲಿನಲ್ಲಿ ಮನೆಗಳ ಮಾಳಿಗೆಯಿಂದ ಮಾಳಿಗೆಗೆ ಜಿಗಿಯುತ್ತ ನಾಗರಿಕರಿಗೆ ಕಿರುಕುಳ ನೀಡುತ್ತಿವೆ.
‘ಮಹಿಳೆಯರು ಮಾಳಿಗೆ ಮೇಲೆ ಬಟ್ಟೆ ಒಣಗಿಸುವುದಕ್ಕೂ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು-ನಾಲ್ಕು ಮಂಗಗಳು ಗುಂಪು ಗೂಡಿ ಹೆದರಿಸುತ್ತಿವೆ. ಮನೆಯಂಗಳದಲ್ಲಿ ಬೆಳೆಸಿದ ಹಣ್ಣು, ಹೂವಿನ ಗಿಡಗಳು ಸಂಪೂರ್ಣವಾಗಿ ತಿಂದು ಬಿಸಾಕುತ್ತಿವೆ. ಕೇಬಲ್ ಡಿಶ್‌ಗಳನ್ನು ಹಾಳುಮಾಡುತ್ತಿವೆ. ನಿತ್ಯವೂ ಮಂಗಗಳ ಉಪಟಳದಿಂದ ವಸ್ತು ಹಾಳಾಗುತ್ತಿದೆ. ತಕ್ಷಣ ನಾಡಿನಿಂದ ಕಾಡಿಗೆ ಸೇರಿಸುವ ಕೆಲಸ ಮಾಡಬೇಕು’ ಎಂದು ನಿರ್ಣಾ ಗ್ರಾಮದ ರಾಜಕುಮಾರ್ ನುಡಿಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.