ADVERTISEMENT

ಬೀದರ್‌ | ಮುಂಗಾರು ಸಂಭ್ರಮ: ಚುರುಕು ಪಡೆದ ಬಿತ್ತನೆ

ಬೀದರ್‌ ಜಿಲ್ಲೆಯಾದ್ಯಂತ ವ್ಯಾಪಿಸಿದ ಮುಂಗಾರು ಮಳೆ; ಕೃಷಿ ಚಟುವಟಿಕೆಗಳು ಬಿರುಸು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಜೂನ್ 2024, 5:07 IST
Last Updated 13 ಜೂನ್ 2024, 5:07 IST
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ರೈತನೊಬ್ಬ ಬಿತ್ತನೆ ಕೈಗೊಂಡಿರುವುದು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ರೈತನೊಬ್ಬ ಬಿತ್ತನೆ ಕೈಗೊಂಡಿರುವುದು   

ಬೀದರ್‌: ಜಿಲ್ಲೆಯಾದ್ಯಂತ ಮುಂಗಾರು ಮಳೆ ವ್ಯಾಪಿಸಿಕೊಂಡಿರುವುದರಿಂದ ರೈತರು ಸಂಭ್ರಮದಲ್ಲಿದ್ದಾರೆ.

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಈ ವರ್ಷ ಸಕಾಲಕ್ಕೆ ಜಿಲ್ಲೆಗೆ ಮುಂಗಾರು ಆಗಮನವಾಗಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ವರ್ಷಧಾರೆ ಆಗುತ್ತಿರುವುದರಿಂದ ಸಹಜವಾಗಿಯೇ ರೈತರ ಖುಷಿಗೆ ಕಾರಣವಾಗಿದೆ. ಹೆಚ್ಚಿನ ಭಾಗಗಳಲ್ಲಿ ನೆಲ ಹಸಿಯಾಗಿರುವುದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹೊಲಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾನ್ಯವಾಗಿದೆ.

ADVERTISEMENT

ಜಿಲ್ಲೆಯಲ್ಲಿ ಶೇ 90ರಷ್ಟು ಭಾಗ ಮಳೆಯಾಶ್ರಿತ ಪ್ರದೇಶವಾಗಿದೆ. ಮಳೆಯನ್ನೇ ನೆಚ್ಚಿಕೊಂಡು ರೈತರು ಬೆಳೆ ಬೆಳೆಯುತ್ತಾರೆ. ಪ್ರಮುಖವಾಗಿ ಸೋಯಾಬೀನ್‌, ತೊಗರಿ, ಉದ್ದು, ಹೆಸರು, ಎಳ್ಳು ಬೆಳೆಸುತ್ತಾರೆ. ಇನ್ನು, ನೀರಾವರಿ ವ್ಯವಸ್ಥೆ ಇರುವ ರೈತರು ಹೆಚ್ಚಾಗಿ ಕಬ್ಬು ಬೆಳೆಯುತ್ತಾರೆ. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಸೋಯಾ ಉಪ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವುದರಿಂದ ಹೆಚ್ಚಿನ ರೈತರು ಸೋಯಾ ಅವರೆ ಬೆಳೆಯುತ್ತಿದ್ದಾರೆ.

ಬರದಿಂದ ಹೊರಬಹುದೇ?:

ಕಳೆದ ವರ್ಷ ಕೂಡ ಮುಂಗಾರು ಸಕಾಲಕ್ಕೆ ಆಗಮಿಸಿತ್ತು. ಬಿತ್ತನೆ ಕೂಡ ಉತ್ತಮ ರೀತಿಯಲ್ಲಿ ನಡೆದಿತ್ತು. ಆದರೆ, ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮಳೆ ಕೈಕೊಟ್ಟಿದ್ದರಿಂದ ರೈತರ ಬೆಳೆದ ಬೆಳೆಗಳು ಮೇಲೇಳಲಿಲ್ಲ. ಹಾಕಿದ ಬಂಡವಾಳ ಕೂಡ ಕೈಸೇರಿರಲಿಲ್ಲ. ಪರಿಸ್ಥಿತಿ ಗಂಭೀರವಾಗಿದ್ದರಿಂದ ರಾಜ್ಯ ಸರ್ಕಾರವು ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿತ್ತು. ಇತ್ತೀಚೆಗಷ್ಟೇ ರೈತರಿಗೆ ಪರಿಹಾರ ವಿತರಿಸಲಾಗಿದೆ. ಈ ಸಲ ಹೊಸ ಆಶಾಭಾವದೊಂದಿಗೆ ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಂದೆಡೆ, ಹವಾಮಾನ ಇಲಾಖೆಯು, ಈ ವರ್ಷ ಎಂದಿನಂತೆ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದೆ. ಇದರಿಂದ ಸಹಜವಾಗಿಯೇ ರೈತರ ನಿರೀಕ್ಷೆಗಳು ಹೆಚ್ಚಾಗಿವೆ.

ಜಿಲ್ಲೆಯ ಎಲ್ಲ ಕಡೆಗಳಲ್ಲಿ ಈಗಾಗಲೇ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲಾಗುತ್ತಿದೆ. ಔರಾದ್‌ ಸೇರಿದಂತೆ ಕೆಲವೆಡೆ ನೂಕು ನುಗ್ಗಲಾಗುತ್ತಿರುವುದು ಗಮನಕ್ಕೆ ಬಂದ ನಂತರ ಸರಿಪಡಿಸಲಾಗಿದೆ.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬೀಜ, ರಸಗೊಬ್ಬರ ಸಮರ್ಪಕವಾಗಿ ವಿತರಿಸಲಾಗುತ್ತಿದೆ. ರೈತರಿಗೆ ಹೆಚ್ಚಿನ ತೊಂದರೆ ಆಗುತ್ತಿಲ್ಲ. ಪ್ರತಿವರ್ಷ ಮುಂಗಾರು ಆಗಮನದ ನಂತರ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ. ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡರೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ’ ಎಂದು ಬಗದಲ್‌ ಗ್ರಾಮದ ರೈತ ಬಲಭೀಮ್‌ ತಿಳಿಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಬೀದರ್‌ ತಾಲ್ಲೂಕಿನ ಕಮಠಾಣ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಪರಿಶೀಲಿಸಿದರು
ಎಲ್ಲೆಲ್ಲಿ ಹಸಿ ಮಳೆಯಾಗಿದೆಯೋ ಅಂತಹ ಕಡೆ ರೈತರು ಬಿತ್ತನೆ ಕಾರ್ಯ ಆರಂಭಿಸಬಹುದು. ಸೋಯಾಬೀನ್‌ ತೊಗರಿ ಉದ್ದು ಹೆಸರು ಎಳ್ಳು ಬೆಳೆಯಬಹುದು.
–ಡಾ. ರತೇಂದ್ರನಾಥ ಸುಗೂರ ಜಂಟಿ ಕೃಷಿ ನಿರ್ದೇಶಕ ಬೀದರ್‌
ಕೋಹಿನೂರ್‌ ಸಾಯಗಾಂವ್‌ನಲ್ಲಿ ಹೆಚ್ಚು ಮಳೆ
ಬೀದರ್‌ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಸಂಜೆಯಿಂದ ತಡರಾತ್ರಿವರೆಗೆ ಉತ್ತಮ ವರ್ಷಧಾರೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2.9 ಸೆಂ.ಮೀ ಮಳೆ ದಾಖಲಾಗಿದೆ. ಅತಿ ಹೆಚ್ಚಿನ ಮಳೆ ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್‌ ಹೋಬಳಿಯಲ್ಲಿ ವರದಿಯಾಗಿದೆ. 18 ಸೆಂ.ಮೀ ಮಳೆಯಾಗಿದೆ. ಮಂಠಾಳನಲ್ಲಿ 7.4 ಸೆಂ.ಮೀ ಮುಡಬಿಯಲ್ಲಿ 7 ಸೆಂ.ಮೀ ಬಸವಕಲ್ಯಾಣದಲ್ಲಿ 6.9 ಸೆಂ.ಮೀ ಚಿಟಗುಪ್ಪದಲ್ಲಿ 6.6 ಸೆಂ.ಮೀ ಭಾಲ್ಕಿ ತಾಲ್ಲೂಕಿನ ಸಾಯಗಾಂವ್‌ನಲ್ಲಿ 8.8 ಸೆಂ.ಮೀ ಮಳೆ ದಾಖಲಾಗಿದೆ. ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ 5.2 ಸೆಂ.ಮೀ ಮಳೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.