ಬೀದರ್: ಪ್ರಸಕ್ತ ವರ್ಷದ ಮುಂಗಾರು ಮಳೆ ಜಿಲ್ಲೆಯ ಜನರಿಗೆ ಖುಷಿ ಕೊಟ್ಟಿಲ್ಲ. ಅದರಲ್ಲೂ ರೈತ ಸಮುದಾಯಕ್ಕೆ ಬರೆ ಎಳೆದಿದೆ.
ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದ್ದರಿಂದ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಇಷ್ಟೇ ಅಲ್ಲ, ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿ ಕೂಡ ನಷ್ಟವಾಗಿದೆ. ಜಿಲ್ಲಾಡಳಿತದ ಅಂದಾಜಿನ ಪ್ರಕಾರ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ₹15 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.
ಜೂನ್‌ನಿಂದ ಇದುವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ 14,905 ಹೆಕ್ಟೇರ್ ಬೆಳೆಗೆ ಹಾನಿ ಉಂಟಾಗಿದೆ. 944 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಭಾಲ್ಕಿ ತಾಲ್ಲೂಕಿನ ಒಬ್ಬ ವ್ಯಕ್ತಿ ಜೀವ ಕಳೆದುಕೊಂಡಿದ್ದಾನೆ.
140ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿವೆ. ನಾಲ್ಕು ರಾಜ್ಯ ಹೆದ್ದಾರಿಗಳು, ಐದು ಪ್ರಮುಖ ರಸ್ತೆಗಳು ಹಾಳಾಗಿವೆ. 17 ಸೇತುವೆಗಳಿಗೂ ಹಾನಿ ಆಗಿದೆ. ಮುಂಗಾರು ಮಳೆಯಿಂದ ಅತಿ ಹೆಚ್ಚು ಹಾನಿಗೆ ಒಳಗಾಗಿದ್ದು ಉದ್ದು. ರಾಶಿ ಸಂದರ್ಭದಲ್ಲಿಯೇ ಹೆಚ್ಚಿನ ಮಳೆಯಾಗಿದ್ದರಿಂದ ಉದ್ದಿನ ಬೆಳೆಗೆ ಹೆಚ್ಚು ಪೆಟ್ಟು ಬಿದ್ದಿದೆ.
ಇನ್ನು, ಸೆಪ್ಟೆಂಬರ್, ಅಕ್ಟೋಬರ್‌ನಲ್ಲೂ ಬಿಟ್ಟು ಬಿಟ್ಟು ಮಳೆಯಾದ ಕಾರಣ ಸೋಯಾ ಅವರೆ ಮೇಲೂ ಪರಿಣಾಮ ಬೀರಿದೆ. ಸಕಾಲಕ್ಕೆ ರೈತರಿಗೆ ರಾಶಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸೋಯಾ ಖರೀದಿಗೆ ಖರೀದಿ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿತ್ತು. ಆದರೆ, ಹೆಚ್ಚಿನ ರೈತರಿಗೆ ರಾಶಿ ಮಾಡಲು ಸಾಧ್ಯವಾಗದ ಕಾರಣ ಹೆಸರು ನೋಂದಣಿ ಮಾಡಿಸಿಕೊಂಡಿಲ್ಲ. ಹೆಸರು ನೋಂದಣಿಗೆ ದಿನಾಂಕ ವಿಸ್ತರಿಸಬೇಕೆಂದು ರೈತ ಸಂಘ ಆಗ್ರಹಿಸಿದ ಬೆನ್ನಲ್ಲೇ ಜಿಲ್ಲಾಡಳಿತವು ಸರ್ಕಾರಕ್ಕೆ ಪತ್ರ ಬರೆದಿದೆ.
‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿವೆ. ಕೈಗೆ ಬಂದ ಬೆಳೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲಾರದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅಧಿಕಾರಿಗಳು ನಿಖರವಾದ ಸರ್ವೇ ನಡೆಸಿ, ರೈತರಿಗೆ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ಬಸವರಾಜ ಆಗ್ರಹಿಸಿದ್ದಾರೆ.
ಹೋದ ವರ್ಷ ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ವರ್ಷವಾದರೂ ಚೇತರಿಸಿಕೊಳ್ಳಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.