ADVERTISEMENT

ಬೀದರ್‌–ಬೆಂಗಳೂರು ‘ವಂದೇ ಭಾರತ್‌’ ರೈಲಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:40 IST
Last Updated 24 ಅಕ್ಟೋಬರ್ 2024, 15:40 IST
ತೆಲಂಗಾಣದ ಸಿಕಿಂದ್ರಾಬಾದ್‌ನಲ್ಲಿ ಗುರುವಾರ ನಡೆದ ದಕ್ಷಿಣ ಮಧ್ಯ ರೈಲ್ವೆ ಸಭೆಯಲ್ಲಿ ಸಂಸದ ಸಾಗರ್‌ ಖಂಡ್ರೆ ಮಾತನಾಡಿದರು
ತೆಲಂಗಾಣದ ಸಿಕಿಂದ್ರಾಬಾದ್‌ನಲ್ಲಿ ಗುರುವಾರ ನಡೆದ ದಕ್ಷಿಣ ಮಧ್ಯ ರೈಲ್ವೆ ಸಭೆಯಲ್ಲಿ ಸಂಸದ ಸಾಗರ್‌ ಖಂಡ್ರೆ ಮಾತನಾಡಿದರು   

ಬೀದರ್‌: ‘ಬೀದರ್‌–ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸೇವೆ ಪ್ರಾರಂಭಿಸಬೇಕು’ ಎಂದು ಸಂಸದ ಸಾಗರ್‌ ಖಂಡ್ರೆ ಆಗ್ರಹಿಸಿದರು.

ತೆಲಂಗಾಣದ ಸಿಕಿಂದ್ರಾಬಾದ್‌ನಲ್ಲಿ ಗುರುವಾರ ನಡೆದ ದಕ್ಷಿಣ ಮಧ್ಯ ರೈಲ್ವೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬೀದರ್ ಮತ್ತು ಇತರ ಪ್ರಮುಖ ನಗರಗಳ ನಡುವಿನ ರೈಲು ಸಂಚಾರವನ್ನು ಹೆಚ್ಚಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು. ಬೀದರ್-ಯಶವಂತಪುರ ರೈಲು ವಾರದಲ್ಲಿ ನಾಲ್ಕು ಬಾರಿ ಬೀದರ್‌ನಿಂದ ಹಾಗೂ ಮೂರು ಬಾರಿ ಲಾತೂರಿನಿಂದ ಸಂಚರಿಸುತ್ತಿದೆ. ನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಈ ರೈಲು ಸಾಕಷ್ಟು ಅನುಕೂಲಕರವಲ್ಲ. ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೀದರ್-ಯಶವಂತಪುರ ರೈಲು ವಾಯಾ ಕಲಬುರಗಿ ಮೂಲಕ ಓಡಿಸಬೇಕು. ಅದರೊಂದಿಗೆ ವಂದೇ ಭಾರತ್‌ ರೈಲು ಕೂಡ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಬೀದರ್-ಮುಂಬೈ ರೈಲು ವಾರದಲ್ಲಿ ಮೂರು ದಿನ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಈ ರೈಲು ನಿತ್ಯ ಓಡಿಸಬೇಕು. ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗವನ್ನು ಚಿಂಚೋಳಿ ಮೂಲಕ ಮಾಡಲು ಯೋಜಿಸಬೇಕು. ಇದರಿಂದ ಆ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ. ಖಾನಾಪುರದ ಪಿಟ್ ಲೈನ್ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಬೀದರ್‌ನಿಂದ ನವದೆಹಲಿಗೆ ನೇರ ರೈಲು ಸಂಪರ್ಕದ ಅಗತ್ಯವಿದ್ದು, ದಕ್ಷಿಣ ಎಕ್ಸ್‌ಪ್ರೆಸ್‌ ರೈಲನ್ನು ಬೀದರ್‌ವರೆಗೆ ವಿಸ್ತರಿಸಬೇಕು ಎಂದರು.
ಬೀದರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ (ಎಲ್‌ಸಿ) ಗೇಟ್, ಆರ್‌ಒಬಿ ಮತ್ತು ಆರ್‌ಯುಬಿ ನಿರ್ಮಾಣ ಅಥವಾ ಸುಧಾರಣೆಗೆ ಒಪ್ಪಿಗೆ ನೀಡಲು ತಕ್ಷಣ ಅನುಮೋದನೆ ಕೊಡಬೇಕೆಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.