ಬೀದರ್: '75 ವರ್ಷಕ್ಕೆ ಸಕ್ರಿಯ ರಾಜಕಾರಣದಿಂದ ಬಿಜೆಪಿಯ ಅನೇಕ ಮುಖಂಡರಿಗೆ ನಿವೃತ್ತಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಂದಿನ ವರ್ಷ 75 ತುಂಬುತ್ತದೆ. ಅವರು ಕೂಡ ರಾಜಕೀಯದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ಅವರು ಮತ್ತೊಂದು ಸುಳ್ಳು ಹೇಳಿದಂತಾಗುತ್ತದೆ' ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಮೋದಿಯವರೇ 75 ವರ್ಷಕ್ಕೆ ರಾಜಕೀಯದಿಂದ ನಿವೃತ್ತರಾಗಬೇಕೆಂಬ ನಿಯಮ ಬಿಜೆಪಿಯಲ್ಲಿ ಜಾರಿಗೆ ತಂದಿದ್ದಾರೆ. ಅದರ ಪ್ರಕಾರ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕರನ್ನು ಮನೆಯಲ್ಲಿ ಕೂರಿಸಿದ್ದಾರೆ. ಈ ನಿಯಮ ಅವರಿಗೂ ಅನ್ವಯಿಸುತ್ತದೆ. ಆದರೆ, ಕೇಂದ್ರ ಗೃಹಸಚಿವ ಅಮಿತ್ ಶಾ ಅದಕ್ಕೆ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನರೇಂದ್ರ ಮೋದಿ ರಾಕ್ಷಸನಿದ್ದಂತೆ. ಈ ಸಲದ ಚುನಾವಣೆಯಲ್ಲಿ ಪುನಃ ಗೆದ್ದರೆ ಸರ್ವಾಧಿಕಾರಿ ಆಗುತ್ತಾರೆ. ಮುಂದೆ ಚುನಾವಣೆಗಳೇ ನಡೆಯುವುದಿಲ್ಲ. ಇ.ಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಚಲಾಯಿಸುತ್ತಿದ್ದಾರೆ. ಚುನಾವಣಾ ಬಾಂಡ್ ಗಳ ಮೂಲಕ ಹಾಡಹಗಲೇ ದರೋಡೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾನ, ಮಾರ್ಯದೆ ಇಲ್ಲ. ಅಧಿಕಾರಕ್ಕಾಗಿ ಯಾರನ್ನಾದರೂ ಸಾಯಿಸುವ ನರಹಂತಕರು ಬಿಜೆಪಿಯವರು. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ವಾಮ ಮಾರ್ಗ ಹಿಡಿದಿದ್ದಾರೆ’ ಎಂದು ಆರೋಪಿಸಿದರು.
‘ಬಿಜೆಪಿಯವರು ಯಾರನ್ನೂ ಪ್ರೀತಿಯಿಂದ ನೋಡುತ್ತಿಲ್ಲ. ಇ.ಡಿ, ಸಿಬಿಐ ಛೂ ಬಿಟ್ಟು ಏನು ತಪ್ಪು ಇರದಿದ್ದರೂ ವಿರೋಧಿಗಳನ್ನು ಹಣಿಯುತ್ತಿದ್ದಾರೆ. ಸಣ್ಣ ತಪ್ಪುಗಳನ್ನು ಹಿಡಿದು ಜೈಲಿಗೆ ಹೋಗಿ ಇಲ್ಲವೇ, ಬಿಜೆಪಿ ಹುಂಡಿಗೆ ಹಣ ಹಾಕಿ ಎನ್ನುತ್ತಿದ್ದಾರೆ. ಇದು ರಾಕ್ಷಸ ಪ್ರವೃತ್ತಿಯ ದುರಾಡಳಿತಕ್ಕೆ ಸಾಕ್ಷಿ. ವಿಷಯಾಧಾರಿತ ರಾಜಕಾರಣ ಮಾಡಬೇಕು. ರಾಜಕಾರಣದಲ್ಲಿ ದ್ವೇಷ ಇರಬಾರದು’ ಎಂದು ಹೇಳಿದರು.
‘ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕಾಲಮಿತಿಯಲ್ಲಿ ಪ್ರಕರಣದ ವಿಚಾರಣೆ ಮುಗಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸವಾಗಬೇಕು. ತಪ್ಪು ಮಾಡಿದ ಕಾರಣದಿಂದಲೇ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಏನೋ ಪ್ಲ್ಯಾನ್ ಮಾಡುತ್ತಿರುವಂತಿದೆ’ ಎಂದು ಅನುಮಾನಪಟ್ಟರು.
ಪಕ್ಷೇತರ ಅಭ್ಯರ್ಥಿಗೆ ಬೆಂಬಲ
‘ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಸಲ ಆಮ್ ಆದ್ಮಿ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಪಕ್ಷೇತರ ಅಭ್ಯರ್ಥಿ ಪ್ರತಾಪ್ ರೆಡ್ಡಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ. ಸಮಾಜ ಸೇವೆ ಮೂಲಕ ಪ್ರತಾಪ್ ರೆಡ್ಡಿ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಿಂದ ಸೋಲು ಕಂಡಿದ್ದಾರೆ. ಆದರೆ, ಸೋತ ನಂತರವೂ ಜನಸಂಪರ್ಕ ಕಳೆದುಕೊಂಡಿಲ್ಲ’ ಎಂದು ಹೇಳಿದರು.
‘ಕಾಂಗ್ರೆಸ್ ಹಾಲಿ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಹಿಂದೆ ಬಿಜೆಪಿಯ ಅಮರನಾಥ ಪಾಟೀಲ ಇದ್ದರು. ಇಬ್ಬರು ಒಂದು ದಿನವೂ ಶಿಕ್ಷಕರು, ಪದವೀಧರರ ಕುರಿತು ಸದನದಲ್ಲಿ ಮಾತನಾಡಿಲ್ಲ. ಈ ಇಬ್ಬರು ಅಭ್ಯರ್ಥಿಗಳಿಗೆ ಹೋಲಿಸಿದರೆ ಪ್ರತಾಪ್ ರೆಡ್ಡಿ ಅವರಿಗೆ ಈ ಕ್ಷೇತ್ರದ ಕುರಿತು ಸಾಕಷ್ಟು ತಿಳಿವಳಿಕೆ ಇದೆ. ಕಳೆದ ಸಲದ ಚುನಾವಣೆಯಲ್ಲಿ ಅವರು ಹೆಚ್ಚಿನ ಮತಗಳು ತಿರಸ್ಕೃತಗೊಂಡಿದ್ದರಿಂದ ಸೋಲು ಕಂಡರು. ಪದವೀಧರ ಮತದಾರರು ಸೂಕ್ತ ರೀತಿಯಲ್ಲಿ ಹಕ್ಕು ಚಲಾಯಿಸಬೇಕು’ ಎಂದು ಮನವಿ ಮಾಡಿದರು.
ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರತಾಪ್ ರೆಡ್ಡಿ ಮಾತನಾಡಿ, ‘1977ರಲ್ಲಿ ನಾನು ಜೆ.ಪಿ.ಚಳವಳಿಯಿಂದ ಆಕರ್ಷಿತನಾಗಿ ಅವರ ಹಾದಿಯಲ್ಲಿ ಮುನ್ನಡೆದಿದ್ದೇನೆ. ಕಾಂಗ್ರೆಸ್‌ನವರು ಟಿಕೆಟ್ ಕೊಡುವ ಭರವಸೆ ಕೊಟ್ಟು ಹಿಂದೆ ಸರಿದರು. ಹಾಲಿ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಅವರಿಗೆ ಮಣೆ ಹಾಕಿದ್ದಾರೆ. ಅನೇಕ ಜನ ಪದವೀಧರರು ನನ್ನ ಭೇಟಿ ಮಾಡಿ ನೀವು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಒತ್ತಡ ಹಾಕಿರುವುದರಿಂದ ಚುನಾವಣೆಗೆ ನಿಂತಿದ್ದೇನೆ’ ಎಂದರು.
‘ಈ ಭಾಗದಿಂದ ಸತತ ಗೆಲ್ಲುತ್ತ ಬಂದಿರುವ ಬಿಜೆಪಿ, ಕಾಂಗ್ರೆಸ್ ನವರು ಯಾವುದೇ ಶಾಲಾ-ಕಾಲೇಜುಗಳಿಗೆ ಅನುದಾನ ಕೊಟ್ಟಿಲ್ಲ, ಭೇಟಿ ನೀಡಿಲ್ಲ. ಪದವೀಧರ ಮತಕ್ಷೇತ್ರದ ಮತದಾರರು ಬುದ್ಧಿವಂತರು. ಬಿಜೆಪಿ, ಕಾಂಗ್ರೆಸ್ ನವರ ಕೆಲಸ ನೋಡಿದ್ದಾರೆ. ಒಂದು ಸಲ ನನಗೆ ಅವಕಾಶ ಮಾಡಿಕೊಡಬೇಕು. ಈ ಕ್ಷೇತ್ರದಿಂದ ಸತತವಾಗಿ ಕಲಬುರಗಿ, ಬೀದರ್ ನವರು ಪ್ರತಿನಿಧಿಸುತ್ತ ಬಂದಿದ್ದಾರೆ. ಒಮ್ಮೆ ಬಳ್ಳಾರಿಯವನಾದ ನನಗೆ ಅನುಕೂಲ ಮಾಡಿಕೊಡಬೇಕೆಂದು’ ಮನವಿ ಮಾಡಿದರು.
‘371(ಜೆ) ಕೋಶದ ಕಚೇರಿ ಈಗಲೂ ಬೆಂಗಳೂರಿನಿಂದ ಕೆಲಸ ನಿರ್ವಹಿಸುತ್ತಿದೆ. ಆ ಕಚೇರಿ ಕಲಬುರಗಿಗೆ ಬರಬೇಕು. ಅದರ ಬಗ್ಗೆ ಹಾಲಿ, ಮಾಜಿ ಶಾಸಕರು ಚಕಾರ ಎತ್ತಿಲ್ಲ. ಅತಿಥಿ ಉಪನ್ಯಾಸಕರ ಸಮಸ್ಯೆ, ಶಾಲಾ, ಕಾಲೇಜುಗಳ ಸ್ಥಿತಿ ಗತಿ, ಅನುದಾನದ ವಿವಿಧ ಮೂಲಗಳ ಬಗ್ಗೆ ನಿಖರವಾದ ಮಾಹಿತಿಯೇ ಇಲ್ಲ. ನನಗೆ ಯಾರೂ ಹೈಕಮಾಂಡ್ ಇಲ್ಲ. ಮತದಾರರೇ ಹೈಕಮಾಂಡ್. ಅವರಿಗಾಗಿ ಸ್ವತಂತ್ರವಾಗಿ ಕೆಲಸ ಮಾಡುವೆ. ನನ್ನ ಹಾಗೂ ನನ್ನ ಸಹೋದರನ ಮಗ, ಶಾಸಕ ಭರತ್ ರೆಡ್ಡಿ ಮನೆ, ಕಚೇರಿಗಳ ಮೇಲೆ ಇ.ಡಿ ದಾಳಿ ನಡೆಸಿದ್ದಾರೆ. ಇದಕ್ಕೆಲ್ಲ ನಾನು ಹೆದರುವವನು ಅಲ್ಲ’ ಎಂದರು.
ಎಎಪಿ ರಾಜ್ಯ ಉಪಾಧ್ಯಕ್ಷ ನಸೀಮ್ ಪಟೇಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.