ಔರಾದ್: ‘ರೈತರು ಒಂದೇ ಬೆಳೆಯ ಮೇಲೆ ಅವಲಂಬನೆಯಾಗದೆ ಬಹು ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ರಾಯಚೂರಿನ ಕೃಷಿ ಸಾಧಕಿ ಕವಿತಾ ಮಿಶ್ರಾ ಸಲಹೆ ನೀಡಿದರು.
ತಾಲ್ಲೂಕಿನ ಧುಪತಮಹಾಗಾಂವ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ರಿಲಾಯನ್ಸ್ ಜಂಟಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಿಸಾನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಡಬಲ್ ಡಿಗ್ರಿ ಪಡೆದ ಮಹಿಳೆ. ನೌಕರಿ ಮಾಡಿ ಕುಟುಂಬದ ಜತೆ ಆರಾಮ ಇರಬಹುದಿತ್ತು. ಆದರೆ ಈಗಿರುವಂತೆ ಸ್ವಾಭಿಮಾನದ ಬದುಕು ಸಾಧ್ಯವಾಗುತ್ತಿರಲಿಲ್ಲ. ಕೃಷಿ ತುಂಬ ಕಷ್ಟದ ಕೆಲಸ ಎಂಬುದು ನನ್ನ ಸ್ವಂತ ಅನುಭವಕ್ಕೆ ಬಂದಿದೆ. ಸಾಕಷ್ಟು ಹಾನಿ ಅನುಭವಿಸಿದ್ದೇನೆ. ಕುಟುಂಬ ಹಾಗೂ ಸಮಾಜದ ವಿರೋಧ ಕಟ್ಟಿಕೊಂಡಿದ್ದೇನೆ. ಆದರೂ ಛಲ ಬಿಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗಿದ ಪರಿಣಾಮ ಇಂದು ಸಮಾಜ ನನ್ನನ್ನು ಹೊಗಳುತ್ತಿದೆ. ನನ್ನ ಕಾರ್ಯಕ್ಕೆ ಇಡೀ ರೈತ ಸಮೂಹ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ’ ಎಂದರು.
‘ಋತು ಹಾಗೂ ಮಾರುಕಟ್ಟೆ ಆಧರಿಸಿ ಬೆಳೆ ಬೆಳೆಯಬೇಕು. ಸಾಂಪ್ರದಾ ಯಿಕ ಬೆಳೆ ಜತೆಗೆ ತೋಟಗಾರಿಕೆ ಬೆಳೆ ಬೆಳೆಯಲು ರೂಢಿಸಿಕೊಳ್ಳಬೇಕು. ಇನ್ನು ಕಡಿಮೆ ನೀರು ಹಾಗೂ ಹೆಚ್ಚಿನ ನಿರ್ವಹಣೆ ಇಲ್ಲದ ಶ್ರೀಗಂಧ ಬೆಳೆಯಲು ಮುಂದಾಗ ಬೇಕು. ಇದಕ್ಕೆ ಬಂಗಾರದ ಬೆಲೆ ಇದೆ. ಇದರಿಂದ ರೈತರು ಕೋಟ್ಯಧಿಪತಿ ಆಗಲು ಸಾಧ್ಯ. ಜೀವಾಮೃತ ಬಳಸಿದ ನನ್ನ ನರ್ಸರಿಯಲ್ಲಿರುವ ಶ್ರೀಗಂಧದ ಸಸಿಗಳಿಗೆ ಭಾರಿ ಬೇಡಿಕೆ ಇದೆ. ಇಂತಹ ಕೆಲಸ ತಾವು ಮಾಡಬಹುದು’ ಎಂದು ತಿಳಿಸಿದರು.
‘ರೈತನಿಗೆ ಹೆಚ್ಚು ತಾಳ್ಮೆ ಬೇಕಾಗುತ್ತದೆ. ಬೇಜಾರು ಮಾಡಿಕೊಳ್ಳದೆ ಹೊಸ ಹೊಸ ಪ್ರಯತ್ನ ಮಾಡಬೇಕು’ ಎಂದು ಅವರು ರೈತರ ಜತೆ ನಡೆದೆ ಸಂವಾದದಲ್ಲಿ ಹೇಳಿದರು. ಪ್ರೊ.ಹಾವಗಿರಾವ ವಟಗೆ, ಸತ್ಯವಾನ ಪಾಟೀಲ, ಬಸವರಾಜ ಘುಳೆ ಸಂವಾದದಲ್ಲಿ ಪಾಲ್ಗೊಂಡಿದ್ದರು.
ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಮಾಣಿಕರಾವ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಎಂ.ಡಿ. ಮಾಜೀದ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸಚಿನ್ ಕೌಠಾ, ಮೀನುಗಾರಿಕೆ ಇಲಾಖೆ ಅಧಿಕಾರಿ ಗಣೇಶ, ರೈತ ಮುಖಂಡ ಶ್ರೀಮಂತ ಬಿರಾದಾರ, ಗಣಪತರಾವ ಖೂಬಾ, ಪ್ರಕಾಶ ಘುಳೆ, ಶಿವರಾಜ ಶೆಟಕಾರ, ತಾ.ಪಂಮಾಜಿ ಅಧ್ಯಕ್ಷ ಪಾಂಡುರಂಗ ಇಟಗಂಪಳ್ಳಿ, ಚನ್ನಬಸಪ್ಪ ಬಿರಾದಾರ, ಪ್ರಕಾಶ ಬಾವುಗೆ ಇದ್ದರು.
ಪಿಡಿಒ ಶಿವಾನಂದ ಔರಾದೆ ಸ್ವಾಗತಿ ಸಿದರು. ರಿಲಾಯನ್ಸ್ ಫೌಂಡೇಶನ್ ಯೋಜನಾಧಿಕಾರಿ ಶಿವಾನಂದ ಮಠಪತಿ ರೈತ ಮೇಳದ ಉದ್ದೇಶ ತಿಳಿಸಿದರು. ಚೆನ್ನಬಸವ ಹೇಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.