ADVERTISEMENT

ಬೀದರ್‌: ರಾಷ್ಟ್ರೀಯ ಏಕತಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 16:25 IST
Last Updated 31 ಅಕ್ಟೋಬರ್ 2023, 16:25 IST
ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಬೀದರ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು, ಸಾರ್ವಜನಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಬೀದರ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು, ಸಾರ್ವಜನಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು   

ಬೀದರ್‌: ಸರ್ದಾರ್‌ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದಿಂದ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.

ಪೌರಾಡಳಿತ ಸಚಿವ ರಹೀಂ ಖಾನ್ ಅವರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಸರ್ದಾರ್‌ ಪಟೇಲರು ಈ ದೇಶದ ಯುವಕರಿಗೆ ಪ್ರೇರಣೆ, ಸ್ಫೂರ್ತಿ. ಪ್ರತಿ ವರ್ಷ ಅವರ ಜಯಂತಿ ಆಚರಿಸುತ್ತಿರುವುದು ಉತ್ತಮ ವಿಚಾರ. ನಗರದಲ್ಲಿ ಪಟೇಲ್‌ ಅವರ ಮೂರ್ತಿ ಸ್ಥಾಪನೆಗೆ ಅಗತ್ಯ ಸಹಾಯ, ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ದೇಶದ ಏಕತೆ ಹಾಗೂ ಅಖಂಡತೆ ಎತ್ತಿ ಹಿಡಿದು ಇಂದು ಕಾಶ್ಮಿರದಿಂದ ಕನ್ಯಾಕುಮಾರಿ ವರೆಗೆ ದೇಶ ಒಂದು ಮಾಡಿದ ಶ್ರೇಯಸ್ಸು ಪಟೇಲ್‌ರಿಗೆ ಸಲ್ಲುತ್ತದೆ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಅಖಂಡ ಭಾರತದ ಪರಿಕಲ್ಪನೆಗೆ ಒತ್ತು ಕೊಟ್ಟು 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿದ ಕೀರ್ತಿ ಪಟೇಲ್‌ರಿಗೆ ಸಲ್ಲುತ್ತದೆ ಎಂದು ಹೇಳಿದರು.

ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಮಾತನಾಡಿ, ಶಿವನಗರದ ಬಳಿ ಪಟೇಲ್‌ ಅವರ ಮೂರ್ತಿ ಸ್ಥಾಪಿಸಲು ಯೋಜಿಸಿ, ತಯಾರಿ ನಡೆಸಲಾಗಿತ್ತು. ಆದರೆ, ಜಿಲ್ಲಾಡಳಿತ ಆ ಜಾಗ ಸ್ವಾಧೀನಪಡಿಸಿಕೊಂಡಿದೆ. ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಅದೇ ಜಾಗದಲ್ಲಿ ಪೂಜೆ, ಕಾರ್ಯಕ್ರಮ ನಡೆಸಲು ಅವಕಾಶ ಸಿಕ್ಕಿದೆ. ಜಿಲ್ಲಾಡಳಿತ ಸಮಾಜ ಸ್ನೇಹಿ ಕೆಲಸಕ್ಕೆ ಸಹಕಾರ ನೀಡಬೇಕೆ ವಿನಃ ತಡೆಯಬಾರದು ಎಂದರು.

ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸೊದ್ದೀನ್‌, ಪೂರ್ಣಿಮಾ ಜಾರ್ಜ್, ಅಬ್ದುಲ್ ಖದೀರ್, ಡಾ.ಬಸವರಾಜ ಪಾಟೀಲ ಅಷ್ಟೂರ, ಬಸವರಾಜ ಧನ್ನೂರ್, ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ಮಂಗಲಾ ಭಾಗವತ, ಬಿ.ಎಸ್ ಕುದುರೆ, ಸೋಮಶೇಖರ ಪಾಟೀಲ ಗಾದಗಿ, ವಿರುಪಾಕ್ಷ ಗಾದಗಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.