ADVERTISEMENT

ಬೀದರ್‌: ಮಾರುಕಟ್ಟೆ ಆಕ್ರಮಿಸಿಕೊಂಡ ನಿಸರ್ಗದ ಸಹಜ ಹಣ್ಣು ‘ಸೀತಾಫಲ’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಅಕ್ಟೋಬರ್ 2024, 4:42 IST
Last Updated 23 ಅಕ್ಟೋಬರ್ 2024, 4:42 IST
<div class="paragraphs"><p>ಬೀದರ್‌ನ ಜನವಾಡ ರಸ್ತೆಯಲ್ಲಿ ಕೊಡೆ ಹಿಡಿದುಕೊಂಡು ಸೀತಾಫಲ ಮಾರಾಟ ಮಾಡುತ್ತಿರುವ ಮಹಿಳೆಯರು </p></div>

ಬೀದರ್‌ನ ಜನವಾಡ ರಸ್ತೆಯಲ್ಲಿ ಕೊಡೆ ಹಿಡಿದುಕೊಂಡು ಸೀತಾಫಲ ಮಾರಾಟ ಮಾಡುತ್ತಿರುವ ಮಹಿಳೆಯರು

   

ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ

ಬೀದರ್‌: ಈಗ ನಗರದ ಯಾವುದೇ ಮಾರುಕಟ್ಟೆಗೆ ಹೋದರೂ ಕಣ್ಣಿಗೆ ಮೊದಲು ರಾಚುವುದು ಸೀತಾಫಲ. ಅಷ್ಟರಮಟ್ಟಿಗೆ ಈ ಹಣ್ಣು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ.

ADVERTISEMENT

ಈಗ ಸೀತಾಫಲ ಹಣ್ಣಿನ ಸೀಸನ್‌. ಸಹಜವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣು ಬರುತ್ತದೆ. ಇದು ನಿಸರ್ಗದತ್ತವಾಗಿ ಸಹಜವಾಗಿ ಬೆಳೆಯುವ ಹಣ್ಣು. ಇದನ್ನು ಬೆಳೆಸಲು ಯಾರು ಕೂಡ ಸಸಿ ನೆಟ್ಟು, ಗೊಬ್ಬರ ಹಾಗೂ ನೀರು ಹಾಕಿ ಪೋಷಿಸಬೇಕಿಲ್ಲ. ಗುಡ್ಡಗಾಡು ಪ್ರದೇಶಗಳು, ಹೊಲಗಳಿಗೆ ಹೋಗುವ ಮಾರ್ಗಗಳಲ್ಲಿ ಅದರ ಪಾಡಿಗೆ ಅದು ಬೆಳೆದು ದೊಡ್ಡದಾಗಿ ಫಲ ಕೊಡುತ್ತದೆ.

ತಾಂಡಾ ಹಾಗೂ ಕುಗ್ರಾಮಗಳ ಜನ ಗುಡ್ಡಗಾಡು ಪ್ರದೇಶಗಳಲ್ಲಿ ಓಡಾಡಿ, ಹಣ್ಣುಗಳನ್ನು ಕಿತ್ತು ಅವುಗಳನ್ನು ಸಂಗ್ರಹಿಸಿ, ‘ಪಾಡ್‌’ (ಹಣ್ಣಾಗಿಸಿ) ಮಾಡಿ ಬಿದಿರಿನ ಬುಟ್ಟಿಗಳಲ್ಲಿ ತುಂಬಿಕೊಂಡು ನಗರ ಹಾಗೂ ಪಟ್ಟಣಗಳಿಗೆ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹೆಚ್ಚಾಗಿ ಹೆಣ್ಣು ಮಕ್ಕಳೇ ಈ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.

ಈ ಹಿಂದೆ ತಾಂಡಾಗಳ ಮಹಿಳೆಯರೇ ಹೆಚ್ಚಾಗಿ ಈ ಕಾಯಕ ಮಾಡುತ್ತಿದ್ದರು. ಈಗ ಬೇರೆ ವರ್ಗದ ಮಹಿಳೆಯರು ಈ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಯಾವುದೇ ಬಂಡವಾಳ ಹಾಕಬೇಕಿಲ್ಲ. ಗುಡ್ಡಗಾಡು ಪ್ರದೇಶದಲ್ಲಿ ಓಡಾಡಿ, ಸಂಗ್ರಹಿಸಬೇಕಾದ ಸ್ವಲ್ಪ ಶ್ರಮದ ಕೆಲಸ ಮಾತ್ರ ಇದೆ.

ಸೆಪ್ಟೆಂಬರ್‌ನಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಈ ಹಣ್ಣು, ನವೆಂಬರ್‌, ಡಿಸೆಂಬರ್‌ವರೆಗೆ ಸಿಗುತ್ತದೆ. ಸದ್ಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬರುತ್ತಿರುವುದರಿಂದ ಬೆಲೆ ಕೂಡ ಕಡಿಮೆ ಇದೆ. ಮಧ್ಯಮ ಗಾತ್ರದ ಒಂದು ಸೀತಾಫಲ ಸದ್ಯ ₹8 ರಿಂದ ₹10ಕ್ಕೆ ಮಾರಾಟವಾಗುತ್ತಿದೆ. 50 ಅಥವಾ 100 ಹಣ್ಣುಗಳಿರುವ ಬುಟ್ಟಿ ಖರೀದಿಸಿದರೆ ಇನ್ನೂ ಕಡಿಮೆ ಬೆಲೆಗೆ ಸಿಗುತ್ತದೆ.

ಸಹಜವಾಗಿ ಬೆಳೆದು ಮಾರುಕಟ್ಟೆಗೆ ಬರುತ್ತಿರುವ ಸೀತಾಫಲದ ಈ ತಳಿಗೆ ‘ಬಾಲನಗರ’ ಎಂಬ ಹೆಸರಿದೆ. ಸಿಹಿಯಾದ ಈ ಹಣ್ಣು ರೋಗ ನಿರೋಧಕ ಗುಣಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಔರಾದ್‌ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದು ಬೆಳೆಯುತ್ತದೆ. ಈ ತಾಲ್ಲೂಕಿನ ಅಧಿಕ ಭಾಗ ಬಯಲು, ಗುಡ್ಡಗಾಡಿನಿಂದ ಕೂಡಿರುವುದರಿಂದ ಇಲ್ಲಿಯೇ ಯಥೇಚ್ಛವಾಗಿ ಬೆಳೆಯುತ್ತದೆ. ಮಿಕ್ಕುಳಿದಂತೆ ಬೀದರ್‌, ಹುಮನಾಬಾದ್‌, ಬಸವಕಲ್ಯಾಣದಲ್ಲೂ ಬೆಳೆಯುತ್ತದೆ. ಆದರೆ, ಪ್ರಮಾಣ ತೀರ ಕಮ್ಮಿ.

ವರ್ಷದಲ್ಲಿ ಎರಡ್ಮೂರು ತಿಂಗಳಷ್ಟೇ ಈ ಹಣ್ಣು ಸಿಗುವುದರಿಂದ ಇದಕ್ಕೆ ವ್ಯವಸ್ಥಿತವಾದ ಮಾರುಕಟ್ಟೆ ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ವ್ಯವಸ್ಥಿತವಾಗಿ ಬೆಳೆಯುವುದೂ ಇಲ್ಲ. ಸಹಜವಾಗಿಯೇ ಸಿಗುವುದರಿಂದ ಕಿತ್ತುಕೊಂಡು, ತಂದು ಮಾರಾಟ ಮಾಡಿ ಹೋಗುತ್ತಾರೆ. ಯಾರಿಗೂ ಮಾರುಕಟ್ಟೆ ಬೇಕೆಂದು ಅನಿಸಿಲ್ಲ. ಅದರ ಬಗ್ಗೆ ಧ್ವನಿ ಎತ್ತುವವರೂ ಇಲ್ಲ.

‘ಸೀತಾಫಲದಲ್ಲಿ ಹೆಚ್ಚಿನ ಮಿನರಲ್ಸ್‌ಗಳಿವೆ. ಆರೋಗ್ಯಕ್ಕೆ ಬಹಳ ಒಳ್ಳೆಯದು. ಜಿಲ್ಲೆಯಲ್ಲಿ ಸದ್ಯ ಯಾವುದೇ ಸಂಸ್ಕರಣ ಘಟಕ ಇಲ್ಲ. ಸೀತಾಫಲದಿಂದ ಜ್ಯೂಸ್‌, ಪಲ್ಪ ಮಾಡಬಹುದು. ಬೇಕಾದಾಗ ಜ್ಯೂಸ್‌ ಮಾಡಬಹುದು. ಆದರೆ, ಸದ್ಯಕ್ಕೆ ಆ ಮಟ್ಟದಲ್ಲಿ ಬೇಡಿಕೆ ಇಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವಿಶ್ವನಾಥ ಜೀರಳೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೀತಾಫಲ

ಖಾಸಗಿ ತೋಟಗಳು ವಿರಳ

ಸೀತಾಫಲದ ಖಾಸಗಿ ತೋಟಗಳ ಸಂಖ್ಯೆ ಜಿಲ್ಲೆಯಲ್ಲಿ ಬಹಳ ವಿರಳವಾಗಿವೆ. ಸಹಜವಾಗಿಯೇ ಹೆಚ್ಚಾಗಿ ಬೆಳೆಯುವುದರಿಂದ ರೈತರು ಇದಕ್ಕೆ ಹೆಚ್ಚಿನ ಒತ್ತು ಕೊಟ್ಟಿಲ್ಲ. ‘ಭಾಲ್ಕಿ ತಾಲ್ಲೂಕಿನ ಬಸವನವಾಡಿ ಕೋನಮೇಳಕುಂದಾ ತರನಳ್ಳಿ ಬಸವಕಲ್ಯಾಣದ ಮಂಠಾಳ ಪರತಾಪುರ ಹುಮನಾಬಾದ್‌ ತಾಲ್ಲೂಕಿನ ಕನಕಟ್ಟಾ ಸೋನಕೇರದಲ್ಲಿ ಕೆಲವರ ಖಾಸಗಿ ತೋಟಗಳಿವೆ. ಹೈಬ್ರಿಡ್‌ ಎನ್‌ಎಂಕೆ–1 ಗೋಲ್ಡನ್‌ ತಳಿ ಬೆಳೆಸುತ್ತಾರೆ. ಹಣ್ಣುಗಳ ಗಾತ್ರ ಹೆಚ್ಚಿರುತ್ತದೆ. ರುಚಿಯೂ ಸ್ವಲ್ಪ ಜಾಸ್ತಿ. ಸಹಜವಾಗಿಯೇ ಮಾರುಕಟ್ಟೆಯಲ್ಲಿ ಬೆಲೆಯೂ ಹೆಚ್ಚಿದೆ. ಇದೆಲ್ಲ ಮಹಾನಗರಗಳಿಗೆ ಹೋಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಜೀರಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.