ಬೀದರ್: ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.
ನಗರದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ರ್‍ಯಾಲಿ ನಡೆಸಿ, ಮನವಿ ಪತ್ರ ಸಲ್ಲಿಸಿದರು. ಕೊಲೆ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹಸಚಿವ ಡಾ. ಜಿ. ಪರಮೇಶ್ವರ ವಿರುದ್ಧ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮುನ್ನ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಈ ಸಮಾಜದ ಓರ್ವ ಯುವತಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲವೆಂದರೆ ಆ ಸ್ಥಾನದಲ್ಲಿ ಅವರು ಇರಬೇಕಾ? ಕೊಲೆಗೀಡಾದ ನೇಹಾ ತಂದೆ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಆಗಿದ್ದಾರೆ. ಈ ನಿಟ್ಟಿನಲ್ಲಿ ಆರೋಪಿ ವಿರುದ್ಧ ಕೂಡಲೇ ಕ್ರಮ ಜರುಗಿಸದಿದ್ದಲ್ಲಿ ನಿಮ್ಮ ಸ್ಥಾನ ಖಾಲಿ ಮಾಡಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ‘ನೇಹಾ ಹಿರೇಮಠ ಅವರ ಮನೆಗೆ ಸಾಂತ್ವನ ಹೇಳುವ ಸೌಜನ್ಯ ಕಾಂಗ್ರೆಸ್‌ನವರಿಗಿಲ್ಲ. ಸಿಎಂ ಆಗಲಿ, ಡಿಸಿಎಂ ಆಗಲಿ ಹಾಗೂ ಗೃಹಸಚಿವರಾದಿಯಾಗಿ ಯಾರೂ ಅವರ ಮನೆಗೆ ಹೋಗಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇಹಾ ಮನೆಗೆ ಹೋಗಿ ಅವರ ತಂದೆಗೆ ಸಾಂತ್ವನ ಹೇಳಿದ್ದಾರೆ. ಬಿಜೆಪಿ ಮಾನವೀಯತೆ ಮೆರೆಯುವ ಪಕ್ಷ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುವ ಪಕ್ಷವಾಗಿದೆ’ ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳು ಅಸುರಕ್ಷಿತರಾಗಿದ್ದಾರೆ. ನಿತ್ಯ ಕೊಲೆ, ದೌರ್ಜನ್ಯ, ಅಪರಾಧ ಕೃತ್ಯಗಳು ಹೆಚ್ಚಾಗಿವೆ. ನಾವು ನಮ್ಮ ಯುವತಿಯರು ಎಲ್ಲಿಗೆ ಹೋಗುತ್ತಿದ್ದಾರೆ. ಏನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಗಮನ ಹರಿಸಬೇಕಿದೆ’ ಎಂದು ಹೇಳಿದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ‘ಇದೊಂದು ಅತ್ಯಂತ ಹೇಯ ಕೃತ್ಯ. ಮಾನವೀಯತೆ ಇಲ್ಲದ ಇಂತಹವರಿಗೆ ತುರ್ತು ಚಿಕಿತ್ಸೆ ನೀಡಲು ಕಾನೂನಿನಲ್ಲಿ ಬದಲಾವಣೆ ತರುವ ಅಗತ್ಯವಿದೆ’ ಎಂದರು.
ಬಿಜೆಪಿ ಕಲಬುರಗಿ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಮಾತನಾಡಿ, ‘ರಾಜ್ಯದಲ್ಲಿ ಹಿಂದೂ ಯುವಕ–ಯುವತಿಯರ ಮೇಲೆ ನಿತ್ಯ ಅಪರಾಧ, ಕೊಲೆ, ವಂಚನೆ ನಡೆಯುತ್ತಿವೆ. ನಮ್ಮವರು ಶಾಹೀನ್ ಕಾಲೇಜಿನಂತಹ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸಬಾರದು’ ಎಂದು ತಿಳಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಲುಂಬಿಣಿ ಗೌತಮ ಮಾತನಾಡಿ, ‘ಫಯಾಜ್ ಎನ್ನುವ ಅಪರಾಧಿಗೆ ಶಿಕ್ಷೆ ಕೊಡುವಷ್ಟು ಧೈರ್ಯ ಈ ಸರ್ಕಾರಕ್ಕಿಲ್ಲ. ನಮಗೆ ಒಪ್ಪಿಸಿ ಮಹಿಳೆಯರಾದ ನಾವುಗಳೇ ಅವನ ಕತ್ತು ಹಿಸುಕಿ ಸಾಯಿಸುತ್ತೇವೆ’ ಎಂದು ಆಕ್ರೋಶ ಹೊರ ಹಾಕಿದರು.
ಜೆಡಿಎಸ್ ಮುಖಂಡ ಐಲಿನ್ ಜಾನ್ ಮಠಪತಿ, ರಾಜಶೇಖರ ಜವಳೆ, ಬಸವರಾಜ ಪಾಟೀಲ ಹಾರೂರಗೇರಿ, ಬಿಜೆಪಿ ಮುಖಂಡರಾದ ಅಮರನಾಥ ಪಾಟೀಲ, ರಾಜಶೇಖರ ನಾಗಮೂರ್ತಿ, ಚಂದ್ರಶೇಖರ ಗಾದಾ, ರೇವಣಸಿದ್ದಪ್ಪ ಜಲಾದೆ, ಜಗದೀಶಚಂದ್ರ ಸ್ವಾಮಿ, ಪೀರಪ್ಪ ಯರನಳ್ಳಿ, ಕಿರಣ ಪಾಟೀಲ, ಮಹೇಶ್ವರ ಸ್ವಾಮಿ, ಶ್ರೀನಿವಾಸ ಚೌದ್ರಿ ಮತ್ತಿತರರು ಪಾಲ್ಗೊಂಡಿದ್ದರು.
ಶೂಟೌಟ್‌ಗೆ ಶಾಸಕರ ಆಗ್ರಹ
ಶಾಸಕ ಶರಣು ಸಲಗರ ಮಾತನಾಡಿ ರಾಜ್ಯ ಸರ್ಕಾರ ಒಂದು ಕಡೆ ಹೆಣ್ಣು ಮಕ್ಕಳಿಗೆ ಗ್ಯಾರಂಟಿ ಭಾಗ್ಯ ಎಂದು ಹೇಳಿ ಇನ್ನೊಂದು ಕಡೆ ಅವರ ಜೀವ ಹಿಂಡುವ ಹಂತಕರಿಗೆ ಆಶ್ರಯ ನೀಡುತ್ತಿದೆ. ನೇಹಾ ಹತ್ಯೆಗೈದವನನ್ನು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ ಶೂಟೌಟ್ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.