ಬೀದರ್: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಗರದಲ್ಲಿ ಸೋಮವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ವಿವಿಧ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹಿಸಿದ ಸಹಿ ಒಳಗೊಂಡ ಪತ್ರವನ್ನು ರಾಷ್ಟ್ರಪತಿ, ರಾಜ್ಯಪಾಲರಿಗೆ ಸಲ್ಲಿಸಲು ಎಬಿವಿಪಿ ತೀರ್ಮಾನಿಸಿದೆ.
‘ನೇಹಾ ಹಿರೇಮಠ ಅವರ ಹತ್ಯೆಯಾದ ದಿನದಿಂದ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಬಿವಿಪಿ ಹಾಗೂ ಇತರೆ ಸಂಘಟನೆಗಳು ಬೃಹತ್ ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದಾಗ ಈ ಪ್ರಕರಣವನ್ನು ತಮ್ಮದೇ ಹಿಡಿತದಲ್ಲಿರುವ ಸಿಐಡಿಗೆ ವಹಿಸಿ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ರಾಜ್ಯ ಸರ್ಕಾರ ಮಾಡಿದೆ’ ಎಂದು ಎಬಿವಿಪಿ ಆರೋಪಿಸಿದೆ.
‘ಈ ಪ್ರಕರಣದ ಹಿಂದೆ ಲವ್ ಜಿಹಾದ್‌ನಂತಹ ಷಡ್ಯಂತ್ರ ಇರುವುದು ಗೋಚರವಾಗುತ್ತಿದೆ. ಸರ್ಕಾರ ಘಟನೆ ಹಿಂದೆ ಇರುವ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಗಲ್ಲು ಶಿಕ್ಷೆ ಆಗುವ ರೀತಿಯಲ್ಲಿ ಪ್ರಕರಣವನ್ನು ತೆಗೆದುಕೊಂಡು ಹೋಗುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ’ ಎಂದು ತಿಳಿಸಿದೆ.
ಎಬಿವಿಪಿ ನಗರ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್, ಸಾಯಿ ಭೋಸ್ತೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಹೇಮಂತ, ಸಂಘಟನಾ ಕಾರ್ಯದರ್ಶಿ ಅಂಬರೀಶ್ ಬಿರಾದಾರ, ಸಾಯಿಕಿರಣ್, ಶಿವಕಾಂತ, ಸಿದ್ದು ನಾಗರಾಜ್, ಶ್ರುತಿ, ಸ್ನೇಹ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.