ಹುಮನಾಬಾದ್: ಕೋವಿಡ್ ಸಂಕಷ್ಟದ ಕಾಲದಲ್ಲಿ ದಿನಪತ್ರಿಕೆ ವಿತರಕರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಸೋಂಕಿನಿಂದ ರಕ್ಷಿಸಿಕೊಳ್ಳಲು ಸರ್ಕಾರ ಸಾರ್ವಜನಿಕರಿಗೆ ಮನೆಗಳಲ್ಲಿಯೆ ಇರುವಂತೆ ಸೂಚನೆ ಮಾಡಿದೆ. ಇಂತಹ ಸಂಕಷ್ಟದ ದಿನಗಳಲ್ಲೂ ತಮ್ಮ ಜೀವದ ಹಂಗು ತೊರೆದು ಮನೆಮನೆಗಳಿಗೆ ತೆರಳಿ ದಿನಪ್ರತಿಕೆ ತಲುಪಿಸುತ್ತಿದ್ದಾರೆ.
‘ಕೊರೊನಾ ವಾರಿಯರ್ಸ್ ರೀತಿ ನಾವು ಕೆಲಸ ಮಾಡುತ್ತಿದ್ದೇವೆ. ವಾರಿಯರ್ಸ್‍ಗಳಿಗೆ ಗೌರವದ ಜತೆಗೆ ಸ್ಥಳೀಯ ಜನಪ್ರತಿನಿಧಿಗಳಿಂದ ಆಹಾರ ಪೊಟ್ಟಣ ಸೇರಿದಂತೆ ಧನ ಸಹಾಯವು ನೀಡಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ನಮ್ಮ ಪ್ರತಿಕಾ ವಿತರಿಕರಿಗೆ ಸರ್ಕಾರ ನೆರವಿಗೆ ಬಂದಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರಿಂದಲೂ ನೆರವಿನ ಅಗತ್ಯವಿದೆ’ ಎಂದು ಪ್ರತಿಕಾ ವಿತರಕ ಮಹೇಶ ತಮ್ಮ ನೋವು ಹಂಚಿಕೊಂಡರು.
‘20 ವರ್ಷಗಳಿಂದ ದಿನಪ್ರತಿಕೆ ಮಾರುತ್ತಿದ್ದೇನೆ. ಲಾಕ್‌ಡೌನ್‍ನಿಂದ ನಮ್ಮ ಕೆಲಸದ ಮೇಲೆ ಭಾರಿ ಹೊಡೆತ ಬಿದ್ದಿದೆ. ಓದುಗರು ಸರಿಯಾದ ಸಮಯಕ್ಕೆ ಹಣ ನೀಡಲು ಹಿಂಜರಿಯುತ್ತಾರೆ. ನಮ್ಮ ಕುಟುಂಬಗಳ ನಿರ್ವಹಣೆಗೆ ಹರಸಾಹಸ ಪಡುವಂತಹ ಪರಿಸ್ಥಿತಿಯಿದೆ’ ಎಂದು ಪ್ರತಿಕಾ ವಿತರಕ ಬಾಬುರಾವ್ ತಿಳಿಸಿದರು.
‘ಲಾಕ್‌ಡೌನ್ ಮಧ್ಯೆಯೂ ಓದುಗರಿಗೆ ದಿನಪತ್ರಿಕೆ ತಲುಪಿಸುತ್ತಿದ್ದೇವೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಸರ್ಕಾರವು ನಮಗೆ ನೆರವಾದಲ್ಲಿ ಅನುಕೂಲವಾಗುತ್ತದೆ ’ ಎಂದು ಹುಡಗಿ ಗ್ರಾಮದ ಪ್ರತಿಕಾ ವಿತರಕ ಶಿವಕುಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.