ADVERTISEMENT

ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಸ್ಪರ್ಧೆಗೆ ಬೀದರ್ ಹುಡುಗಿ ನಿಶಾ

ಒಂಬತ್ತು ಸಾವಿರ ಸ್ಪರ್ಧಿಗಳಲ್ಲಿ ಪ್ರತಿಭೆ ಮೆರೆದ ಜಿಲ್ಲೆಯ ಹುಡುಗಿ

ಚಂದ್ರಕಾಂತ ಮಸಾನಿ
Published 11 ಅಕ್ಟೋಬರ್ 2019, 9:33 IST
Last Updated 11 ಅಕ್ಟೋಬರ್ 2019, 9:33 IST
ನಿಶಾ ತಾಳಂಪಳ್ಳಿ
ನಿಶಾ ತಾಳಂಪಳ್ಳಿ   

ಬೀದರ್: ದ್ವೀಪ ರಾಷ್ಟ್ರ ಇಂಡೊನೇಷ್ಯಾದಲ್ಲಿ ನವೆಂಬರ್‌ 14ರಂದು ನಡೆಯಲಿರುವ ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ 2019ರ ಸ್ಪರ್ಧೆಯಲ್ಲಿ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕಿನ ಧುಮ್ಮನಸೂರು ಗ್ರಾಮದ ನಿಶಾ ತಾಳಂಪಳ್ಳಿ ಪಾಲ್ಗೊಳ್ಳಲಿದ್ದಾರೆ.

ಬಾಲ್ಯದಿಂದಲೇ ಮಾಡೆಲಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವನಿಶಾ, ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಹೆಬ್ಬಯಕೆಯೊಂದಿಗೆ ಪ್ರಯತ್ನ ಮುಂದುವರಿಸಿದ್ದ ನಿಶಾ ಅವರಿಗೆ ಕೊನೆಗೂ ಯಶಸ್ಸಿನ ಬಾಗಿಲು ತೆರೆದುಕೊಂಡಿದೆ.

ನಿಶಾ ತಾಳಂಪಳ್ಳಿ

ಯೋಗ ಹಾಗೂ ನೃತ್ಯ ಅಭ್ಯಾಸ ಮಾಡಿರುವ ನಿಶಾ ಇದೀಗ ಬೌದ್ಧಿಕ ಕೌಶಲ ವೃದ್ಧಿಸಿಕೊಳ್ಳಲು ನಿರಂತರವಾಗಿ ಪ್ರಯತ್ನ ನಡೆಸಿದ್ದಾರೆ. ಮಾದಕ ನೋಟದೊಂದಿಗೆ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ ಅವರ ಭಿನ್ನ ಛಾಯಾಚಿತ್ರಗಳಳಿಗೆ ಮಾಡೆಲಿಂಗ್ ಲೋಕದ ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ನಿಶಾ ಹುಮನಾಬಾದ್‌ನ ಭಗತ್‌ಸಿಂಗ್‌ ಇಂಗ್ಲಿಷ್‌ ಮಿಡಿಯಂ ಹೈಯರ್‌ ಪ್ರೈಮರಿ ಸ್ಕೂಲ್‌ನಲ್ಲಿ ಪ್ರಾಥಮಿಕ, ರವೀಂದ್ರನಾಥ ಟ್ಯಾಗೋರ್‌ ಕಾನ್ವೆಂಟ್‌ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ. ಬೀದರ್‌ನ ಜ್ಞಾನಸುಧಾ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಹಾಗೂ ಹುಮನಾಬಾದ್‌ನ ಬಸವಸಾಗರ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಓದಿದ್ದಾರೆ.

ನಂತರ ಹೈದರಾಬಾದ್‌ನಲ್ಲಿ ಒಂದು ವರ್ಷದ ಡಿಪ್ಲೊಮಾ ಇನ್‌ ಎವಿಯೇಷನ್ ತರಬೇತಿ ಪಡೆದು ಎಂಪಾವರ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಅಲ್ಲಿಂದ ಹೊರ ಬಂದು ಪೂರ್ಣಾವಧಿಗೆ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ 2019ರ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯ ಒಂಬತ್ತು ಸಾವಿರ ಸ್ಪರ್ಧಾಳುಗಳು ಅರ್ಜಿ ಸಲ್ಲಿಸಿದ್ದರು. ಆನ್‌ಲೈನ್‌ನಲ್ಲಿ ಆಡಿಯೊ, ವಿಡಿಯೊ ಸಂದರ್ಶನ ಸಹ ಕೊಟ್ಟಿದ್ದರು. ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ನೇರ ಸಂದರ್ಶನದಲ್ಲಿ 600 ಮಂದಿ ಪಾಲ್ಗೊಂಡಿದ್ದರು. ಆಯ್ಕೆ ವಿಧಾನದ ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ 30 ಸ್ಪರ್ಧಿಗಳನ್ನು ಹಿಂದಿಕ್ಕಿದ ನಿಶಾ ಅವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ.

‘ನಾನು ಹಿಂದುಳಿದ ಕಲ್ಯಾಣ ಕರ್ನಾಟಕದವಳು. ಇಲ್ಲಿ ಯುವತಿಯರು ಮನೆಯಿಂದ ಹೊರಗೆ ಬರುವುದೇ ಅಪರೂಪ. ಈ ಪ್ರದೇಶದಲ್ಲಿ ಮಾಡೆಲಿಂಗ್‌ಗೆ ಪಾಲಕರಿಂದ ಪ್ರೋತ್ಸಾಹ ದೊರೆಯುವುದು ವಿರಳ. ಎನ್‌ಇಕೆಆರ್‌ಟಿಸಿ ಹುಮನಾಬಾದ್‌ ಘಟಕದಲ್ಲಿ ಕ್ಯಾಶಿಯರ್‌ ಆಗಿರುವ ತಂದೆ ಶ್ರೀನಿವಾಸ ತಾಳಂಪಳ್ಳಿ ಹಾಗೂ ತಾಯಿ ಇಂದುಮತಿ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ಸಾಧನೆಯ ಶಿಖರದತ್ತ ಹೆಜ್ಜೆ ಇಡಲು ಸಾಧ್ಯವಾಗಿದೆ’ ಎಂದು ನಿಶಾ ತಾಳಂಪಳ್ಳಿ ಹೆಮ್ಮೆಯಿಂದ ಹೇಳುತ್ತಾರೆ.

ಹಲವು ಹಂತಗಳಲ್ಲಿ ನಡೆದ ಸ್ಪರ್ಧೆಗಳನ್ನು ಸಮರ್ಥವಾಗಿ ಎದುರಿಸಿದ ನಂತರ ನಿಶಾ ಅವರಿಗೆ ಐಎಫ್ಐಇಎಸ್‌ಟಿಎ ನಿರ್ದೇಶಕರಾದ ರಜತ್‌ ಸುನೇಜಾ ಹಾಗೂ ಗುಡ್ಡು ರೂಪಾನಿ ಅವರು ಸೆಪ್ಟೆಂಬರ್‌ 15 ರಂದು ಇಮೇಲ್‌ ಕಳಿಸಿದ್ದಾರೆ. ನಿಶಾ ಇಂಡೊನೇಷ್ಯಾಗೆ ಹೋಗಿ ಬರುವ ವೆಚ್ಚವನ್ನು ಐಎಫ್ಐಇಎಸ್‌ಟಿಎ ಭರಿಸಲಿದೆ. ನಿಶಾ ಅವರು ಅಕ್ಟೋಬರ್‌ 13ರಂದು ಚೆನ್ನೈ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.

ಇಂಡೊನೇಷ್ಯಾದ ಜಕಾರ್ತಾದಲ್ಲಿ 30 ಸ್ಪರ್ಧಿಗಳ ಮಧ್ಯೆ ಪೈಪೋಟಿ ನಡೆಯಲಿದೆ. ಸೌಂದರ್ಯ ಪ್ರದರ್ಶನ ಹಾಗೂ ಐದು ದಿನ ಸಂದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.