ಬೀದರ್: ‘ಸರ್ಕಾರ ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ನೀತಿ ಆಯೋಗ ಸಂಪೂರ್ಣತಾ ಅಭಿಯಾನದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಔರಾದ್ (ಬಿ), ಕಮಲನಗರ, ಹುಮನಾಬಾದ್, ಚಿಟಗುಪ್ಪ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆ ಅಡಿಯಲ್ಲಿ ಸಮುದಾಯ ಬಂಡವಾಳ ನಿಧಿ ಹಾಗೂ ಸುತ್ತು ನಿಧಿ ಚೆಕ್‌ಗಳನ್ನು ವಿತರಿಸಿದರು.
ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕೃಷಿ ಚಟುವಟಿಕೆ, ಗೃಹ ಉದ್ಯೋಗ, ಗುಡಿ ಕೈಗಾರಿಕೆ ಕರಕುಶಲ ವಸ್ತುಗಳ ಉದ್ಯೋಗದಿಂದ ಗ್ರಾಮೀಣ ಮಹಿಳೆಯರು ಉತ್ತಮ ಮಾರುಕಟ್ಟೆ ದೊರಕಿಸಿಕೊಂಡು ಸ್ವಾವಲಂಬಿಗಳಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಆರ್ಥಿಕ ಆದಾಯ ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ನುಡಿದಂತೆ ನಡೆದ ಸರ್ಕಾರ ನಮ್ಮದು. ಐದು ಗ್ಯಾರಂಟಿಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದ್ದರಿಂದ ಕೋಟ್ಯಂತರ ಮಹಿಳೆಯರಿಗೆ ಅನುಕೂಲವಾಗಲಿದೆ. ದಲ್ಲಾಳಿಗಳು ಇಲ್ಲದೇ, ಭ್ರಷ್ಟಾಚಾರ ಇಲ್ಲದೇ ಪಾರದರ್ಶಕವಾಗಿ ನೇರವಾಗಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ತಲುಪಿಸಲಾಗುತ್ತಿದೆ.ಇದರಿಂದ ರಾಜ್ಯದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವಾಗಿದೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಎರಡು ಸಾವಿರ ಎಸ್.ಎಚ್.ಜಿ.ಗಳಿಗೆ ಸ್ವಯಂ ಉದ್ಯೋಗಕ್ಕೆ ಆದಾಯ ತರುವ ಚಟುವಟಿಕೆಗೆ ತರಬೇತಿ, ಬ್ಯಾಂಕ್ ಸಾಲ, ಬಂಡವಾಳ, ಸುತ್ತು ನಿಧಿ ನೀಡಿ ಆರ್ಥಿಕ ಸಮೃದ್ಧಿಯ ಬದಲಾವಣೆ ತರಲಾಗುತ್ತಿದೆ ಎಂದರು.
ಶಾಸಕರ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ, ಮಹಿಳೆಯರು ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಮಾಡುವುದು ಬಹಳ ಮಹತ್ವದ್ದು. ಇದರಿಂದಾಗಿ ಆರ್ಥಿಕವಾಗಿ ಬೆಳೆಯಬಹುದು ಎಂದು ಹೇಳಿದರು.
ಎಂಟು ಸ್ವಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ ಚೆಕ್ ವಿತರಣೆ, ನಾಲ್ಕು ಸ್ವ-ಸಹಾಯ ಗುಂಪುಗಳಿಗೆ ಸುತ್ತು ನಿಧಿ ಚೆಕ್ ವಿತರಿಸಲಾಯಿತು.
ಪೌರಾಡಳಿತ ಸಚಿವ ರಹೀಂ ಖಾನ್, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಕಮಲನಗರ, ಔರಾದ್, ಹುಮನಾಬಾದ್, ಚಿಟ್ಟಗುಪ್ಪ ತಾಲ್ಲೂಕು ಪಂಚಾಯಿತಿ ಇಒಗಳು, ವಿವಿಧ ಸ್ವ-ಸಹಾಯ ಸಂಘದ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.
‘546 ಸ್ವಸಹಾಯ ಸಂಘಗಳಿಗೆ ₹8.96 ಕೋಟಿ’ ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅನುದಾನದಡಿ ಒಟ್ಟು 9715 ಸ್ವಸಹಾಯ ಗುಂಪುಗಳೊಂದಿಗೆ 8889 ಮಹಿಳೆಯರನ್ನು ಜೀವನೋಪಾಯ ಅಭಿಯಾನದಡಿ ಸದೃಢಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 2500 ಕಿರು ಉದ್ದಿಮೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸಲಾಗಿದೆ ಎಂದು ವಿವರಿಸಿದರು. ಪ್ರಸಕ್ತ ಸಾಲಿನಲ್ಲಿ 546 ಗುಂಪುಗಳಿಗೆ ₹8.96 ಕೋಟಿ ಬಿಡುಗಡೆಯಾಗಿದೆ. ಪ್ರತಿ ಗುಂಪಿಗೆ ₹1.50 ಲಕ್ಷ ಬಂಡವಾಳ ನಿಧಿ ನೀಡಲಾಗುತ್ತಿದೆ. 216 ಗುಂಪುಗಳಿಗೆ ₹43 ಲಕ್ಷ ಸುತ್ತು ನಿಧಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.