ADVERTISEMENT

ನನ್ನ ಹೆಸರಲ್ಲಿ ₹50 ಕೋಟಿ ಲೂಟಿ: ಶರಣು ಸಲಗರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:18 IST
Last Updated 16 ಅಕ್ಟೋಬರ್ 2024, 14:18 IST
ಶರಣು ಸಲಗರ
ಶರಣು ಸಲಗರ   

ಬಸವಕಲ್ಯಾಣ: 'ಬಿಜೆಪಿ ಮುಖಂಡ ಸಂಜೀವ ಸುಗೂರೆ ಅವರಿಂದ ನಾನು ₹ 5.50 ಕೋಟಿ ಸಾಲ ಪಡೆದಿರುವುದು ಸುಳ್ಳು. ಬದಲಾಗಿ ಅವರೇ ನನ್ನ ಹೆಸರು ದುರುಪಯೋಗ ಮಾಡಿಕೊಂಡು ₹ 50 ಕೋಟಿ ಆಸ್ತಿ ಮಾಡಿಕೊಂಡಿದ್ದಾರೆ' ಎಂದು ಶಾಸಕ ಶರಣು ಸಲಗರ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸಂಜೀವ ಸುಗೂರೆ ನನ್ನ ತೇಜೋವಧೆ ಮಾಡುವುದಕ್ಕಾಗಿಯೇ ಈಚೆಗೆ ನಾಪತ್ತೆ ಆಗಿದ್ದರು. ಎರಡನೇ ದಿನವೇ ಹೈದರಾಬಾದ್‌ನಲ್ಲಿ ಪತ್ತೆಯಾದರು. ಮನೆಗೆ ಬಂದ ನಂತರ ನನ್ನ ಬಗ್ಗೆ ಅವಮಾನಕರವಾಗಿ ಬರೆದ ಪತ್ರವನ್ನು ಬಹಿರಂಗಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅದರಲ್ಲಿ ನನ್ನಿಂದ ₹ 5.50 ಕೋಟಿ ಸಾಲ ಪಡೆದ ಶರಣು ಸಲಗರ ಹಣ ವಾಪಸು ನೀಡಿಲ್ಲ. ಕೇಳಲು ಹೋದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬರೆಯಲಾಗಿದೆ. ಆದರೆ ಅವರ ಮೊಬೈಲ್‌ ನಾನು ಈಚೆಗೆ ಕರೆಯೇ ಮಾಡಿಲ್ಲ’ ಎಂದರು.

ADVERTISEMENT

‘ಸಂಜೀವ ಸುಗೂರೆ ಮತ್ತು ನಾನು ಆಪ್ತನಾಗಿರುವುದು ಸತ್ಯ. ಈ ವಿಷಯವನ್ನು ಮುಂದೆ ಮಾಡಿಕೊಂಡು ಅವರು ಅಧಿಕಾರಿಗಳ ಹತ್ತಿರ ವರ್ಗಾವಣೆ ಹಾಗೂ ಇತರೆ ಕೆಲಸಕ್ಕೆ ನನಗೆ ಗೊತ್ತಿಲ್ಲದೆಯೇ ಹಣ ಪಡೆದಿದ್ದಾರೆ. ಬಸವಕಲ್ಯಾಣದಲ್ಲಿ ಅವರ 6 ಮನೆಗಳಿವೆ. ಹೈದರಾಬಾದ್ ನಲ್ಲಿ, ಬೆಂಗಳೂರಿನಲ್ಲಿ ನಿವೇಶನಗಳಿವೆ. ಅವರು ಆಗಾಗ ವಿದೇಶಕ್ಕೂ ಹೋಗುತ್ತಾರೆ. ಅಷ್ಟು ದುಡ್ಡು ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.

‘ನನಗೆ ಶಾಸಕರಿಂದ ಜೀವ ಬೆದರಿಕೆ ಇದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಆದರೆ, ಅವರು ಬಡ್ಡಿ ವ್ಯವಹಾರ ಮಾಡುವವರಾಗಿದ್ದಾರೆ. ಕೆಲವೊಬ್ಬರ ಜಮೀನನ್ನು ಅನಧಿಕೃತವಾಗಿ ಕಬಳಿಸಿದ್ದಾರೆ. ಅವರ ಯಾವುದೇ ಕೆಲಸ ಪಾರದರ್ಶಕವಾಗಿಲ್ಲ. ಈ ಕಾರಣ ಅನ್ಯರು ಯಾರಾದರೂ ಅವರಿಗೆ ಏನಾದರೂ ಮಾಡಿದರೆ ಅದಕ್ಕೆ ನಾನೇಕೆ ಹೊಣೆಗಾರ ಆಗುತ್ತೇನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸುತ್ತೇನೆ. ನನ್ನ ತೇಜೋವಧೆ ಮಾಡಿದ್ದರಿಂದ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ, ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ, ಮುಖಂಡರಾದ ರಾಜಕುಮಾರ ಶಿರಗಾಪುರ, ಮೇಘರಾಜ ನಾಗರಾಳೆ ಮತ್ತಿತರರು ಉಪಸ್ಥಿತರಿದ್ದರು.

ಸಂಜೀವ ಸುಗೂರೆ

ಹಣ ಕೊಟ್ಟಿರುವುದು ನಿಜ: ಸಂಜೀವ ಸುಗೂರೆ

ಬಸವಕಲ್ಯಾಣ: ‘ನಾನು ಗೆಳೆಯರು ಮತ್ತು ನೆಂಟರಿಷ್ಟರಿಂದ ₹5.50 ಕೋಟಿ ಹಣ ಸಂಗ್ರಹಿಸಿ ಶಾಸಕ ಶರಣು ಸಲಗರಗೆ ಕೊಟ್ಟಿರುವುದು ನಿಜ. ಆದರೆ ಅವರ ಹೆಸರಲ್ಲಿ ಆಸ್ತಿ ಮಾಡಿರುವುದು ಸುಳ್ಳು’ ಎಂದು ಉದ್ಯಮಿ ಹಾಗೂ ಬಿಜೆಪಿ ಮುಖಂಡ ಸಂಜೀವ ಸುಗೂರೆ ಹೇಳಿದ್ದಾರೆ. ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಶರಣು‌‌ ಸಲಗರ ಕಲಬುರಗಿಯಿಂದ ಬಂದು ಇಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ‌ ಅವರ ಹತ್ತಿರ ಹಣ ಇರಲಿಲ್ಲ. ಆದ್ದರಿಂದ ಕಾರ್ಯಕ್ರಮ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಅಗತ್ಯವಿದ್ದಾಗ ದುಡ್ಡು‌ ಪಡೆದಿದ್ದಾರೆ. ಈ ಬಗ್ಗೆ ನನ್ನ ಹತ್ತಿರ ದಾಖಲೆಗಳಿವೆ’ ಎಂದರು. ‘ಅವರು ಶಾಸಕರಿದ್ದಾಗ ಅಧಿಕಾರಿಗಳು ನನಗೇಕೆ ಹಣ ಕೊಡುತ್ತಾರೆ.‌ ಅಧಿಕಾರಿಗಳ ಮೂಲಕ ಈ ಬಗ್ಗೆ ದಾಖಲೆಸಹಿತ ಸ್ಪಷ್ಟನೆ ನೀಡಿದರೆ ಯಾವುದೇ ಶಿಕ್ಷೆಗೂ ಸಿದ್ಧನಿದ್ದೇನೆ. ಶರಣು ಸಲಗರಗೆ ಕೊಡುವುದಕ್ಕೆ ನನಗೆ ಹಣ ನೀಡಿದವರು ಪದೇ ಪದೇ ಹಣ ವಾಪಸು ಕೇಳುತ್ತಿರುವ ಕಾರಣ ಮಾನಸಿಕವಾಗಿ ನೋವಾಗಿದ್ದರಿಂದ ಹೈದರಾಬಾದ್‌ಗೆ ಹೋಗಿದ್ದೆ. ಈ ಬಗ್ಗೆ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದೇನೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ‌ಹರಿದಾಡುತ್ತಿರುವ ಪತ್ರ ನನ್ನದಲ್ಲ. ಬೇಕೆಂತಲೇ ಅವರೇ ಬರೆಸಿರಬೇಕು.‌ ನಾನು ಬಿಜೆಪಿಯಲ್ಲಿದ್ದು ಅನ್ಯರ ಬೆಂಬಲ ಪಡೆಯುವ ಅಗತ್ಯವಿಲ್ಲ. ಕಾಂಗ್ರೆಸ್‌ನವರು ನನಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವುದು ತಪ್ಪು. ಬೇರೆಯವರ ಮಾತು ಕೇಳಿ ಏನಾದರೊಂದು ಮಾಡಲು ನಾನೇನು ಸಣ್ಣವನೇ’ ಎಂದರು. ‘ಶಾಸಕ ಸಲಗರ ಅವರು ₹ 50 ಕೋಟಿ ಆಸ್ತಿ ಮಾಡಿದ್ದಾನೆ. ಹೈದರಾಬಾದ್‌ನಲ್ಲಿ ನಿವೇಶನ ಖರೀದಿಸಿದ್ದಾನೆ. ಅವ್ಯವಹಾರ ಮಾಡಿದ್ದಾನೆ ಎಂದು ಆರೋಪಿಸಿದ್ದರಿಂದ ನಾನು ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.