ADVERTISEMENT

ಬೆಂಬಲ ಬೆಲೆಯಡಿ ಸೋಯಾಬಿನ್‌ ಖರೀದಿ ವಿಳಂಬ

ಸಂಕಷ್ಟದಲ್ಲಿ ಸೋಯಾಬಿನ್‌ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 8:01 IST
Last Updated 15 ಅಕ್ಟೋಬರ್ 2024, 8:01 IST
ಔರಾದ್ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಸೋಯಾಬಿನ್‌ ಅನ್ನು ಬಿಸಿಲಿಗೆ ಒಣಗಿಸುತ್ತಿರುವುದು
ಔರಾದ್ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಸೋಯಾಬಿನ್‌ ಅನ್ನು ಬಿಸಿಲಿಗೆ ಒಣಗಿಸುತ್ತಿರುವುದು   

ಔರಾದ್: ಸೋಯಾಬಿನ್ ಬೆಳೆ ಮೇಲೆ ನೆಚ್ಚಿಕೊಂಡಿರುವ ತಾಲ್ಲೂಕಿನ ರೈತರಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಖರೀದಿ ಕಾರ್ಯ ಆರಂಭವಾಗಿಲ್ಲ. ಹೀಗಾಗಿ ರೈತರು ತಾವು ಬೆಳೆದ ಸೋಯಾಬಿನ್‌ ಫಸಲನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ. ಸರ್ಕಾರ ಪ್ರತಿ ಕ್ವಿಂಟಲ್‍ಗೆ ₹4,892 ಬೆಲೆ ನಿಗದಿ ಮಾಡಿದೆ. ಆದರೆ ಖಾಸಗಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‍ಗೆ ಅತಿ ಹೆಚ್ಚು ಎಂದರೆ ₹ 4200ಗೆ ಮಾರಾಟವಾಗುತ್ತಿದೆ. ಔರಾದ್ ಹಾಗೂ ಕಮಲನಗರ ಸೇರಿ ಒಟ್ಟು 20 ಕಡೆ ಖರೀದಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಆದರೆ ಇಲ್ಲಿಯ ತನಕ ಈ ಕೇಂದ್ರಗಳಲ್ಲಿ ಕೇವಲ 1,450 ಕ್ವಿಂಟಲ್ ಸೋಯಾಬಿನ್‌ ನೋಂದಣಿ ಆಗಿದೆ. ಆದರೆ ಇನ್ನು ಖರೀದಿ ಎಲ್ಲಿಯೂ ಆರಂಭಿಸಿಲ್ಲ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ 60 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಸೋಯಾಬಿನ್‌ ಬೆಳೆದಿದ್ದಾರೆ. ಪ್ರತಿ ಬಾರಿ ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ಬರುತ್ತಿತ್ತು. ಆದರೆ ಈ ಬಾರಿ ಎಕರೆಗೆ 4 ರಿಂದ 5 ಕ್ವಿಂಟಲ್ ಮಾತ್ರ ಇಳುವರಿ ಬರುತ್ತಿದೆ. ಬಂದಿರುವ ಸೋಯಾ ಇಳುವರಿಯಲ್ಲಿ ತೇವಾಂಶ ಜಾಸ್ತಿಯಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ ರೈತರು ಬಂದಷ್ಟು ಬರಲಿ ಎಂದು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಾಕಿದ ಹಣದಲ್ಲಿ ಅರ್ಧದಷ್ಟೂ ವಾಪಸ್ ಬರುತ್ತಿಲ್ಲ. ಹೀಗಾಗಿ ತಾಲ್ಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಸದ್ಯಕ್ಕಂತೂ ಬೆಂಬಲ ಬೆಲೆ ಖರೀದಿ ಪ್ರಕ್ರಿಯೆ ಶುರುವಾಗಿಲ್ಲ. ಆರಂಭವಾದರೂ ಅದರಿಂದ ರೈತರಿಗೆ ಪ್ರಯೋಜನ ಕಾಣುತ್ತಿಲ್ಲ. ಏಕೆಂದರೆ ಮಳೆಯಿಂದ ಸೋಯಾಬಿನ್‌ ಕಾಳುಗಳಲ್ಲಿ ತೇವಾಂಶ ಹೆಚ್ಚಿದೆ. ಅಲ್ಲದೆ ಖರೀದಿಸಬೇಕಾದ ಸೋಯಾಬಿನ್ ಶೇ 12ರಷ್ಟು ಒಳಗಿನ ತೇವಾಂಶ ಇರಬೇಕು. ಇಂತಹ ಸೋಯಾ ಸಿಗುವುದು ಬಹಳ ಕಡಿಮೆ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.