ಬೀದರ್: ‘ಯಾರೂ ಕರೆಂಟ್ ಬಿಲ್ ಕಟ್ಟಬಾರದು. ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರು ಟಿಕೆಟ್ ಪಡೆಯಬಾರದು. ಪದವೀಧರರು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ‘ಗ್ಯಾರಂಟಿ’ಗಳನ್ನು ನಂಬಿ ಮತದಾರರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಗೆಲ್ಲಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ, ಸಚಿವರ ಹೇಳಿಕೆ ನೋಡಿದಾಗ ಅದು ಕೇವಲ ಚುನಾವಣೆ ಹೇಳಿಕೆ ಅನಿಸುತ್ತಿದೆ. ಮುಗ್ಧ ಜನರಿಗೆ ಮೋಸ ಮಾಡುವ ರಣತಂತ್ರ ರೂಪಿಸಿ ಅಧಿಕಾರಕ್ಕೆ ಬಂದಿದ್ದಾರೆ’ ಎಂದು ಆರೋಪಿಸಿದರು.
ಷರತ್ತುಗಳನ್ನು ವಿಧಿಸಿ ‘ಗ್ಯಾರಂಟಿ’ ಜಾರಿಗೆ ತರುವ ಮಾತುಗಳನ್ನು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ, ಚುನಾವಣೆ ವೇಳೆ ಎಲ್ಲರಿಗೂ ಕೊಡುತ್ತೇವೆ ಎಂದು ಹೇಳಿದ್ದರು. ತೆರಿಗೆ ಪಾವತಿಸುವವರು ಹಾಗೂ ತೆರಿಗೆ ಪಾವತಿಸದವರೆಲ್ಲರಿಗೂ ಸೌಲಭ್ಯಗಳನ್ನು ಕೊಡಬೇಕು. ಕೊಡದಿದ್ದರೆ ಜನ ಪ್ರಶ್ನಿಸಬೇಕೆಂದು ಹೇಳಿದರು.
‘ಮನೆ ಯಜಮಾನಿಗೆ ಪ್ರತಿ ತಿಂಗಳು ಹಣದ ನೆರವು ಕೊಡುವ ವಿಚಾರಕ್ಕೆ ಸಂಬಂಧಿಸಿ ಅತ್ತೆ–ಸೊಸೆ ಜಗಳ ಬಗೆಹರಿಸಲು ಕೌನ್ಸೆಲಿಂಗ್ ನಡೆಸಬೇಕು. ಇದಕ್ಕಾಗಿ ಸಿದ್ದರಾಮಯ್ಯನವರು ಪ್ರತ್ಯೇಕ ಮಂತ್ರಾಲಯ ಆರಂಭಿಸಬೇಕು’ ಎಂದು ವ್ಯಂಗ್ಯವಾಡಿದರು.
ವಿರೋಧ ಪಕ್ಷದವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರ ನಡೆಯನ್ನು ವಿರೋಧಿಸುತ್ತೇನೆ. ‘ಬಡವರ ಏಳಿಗೆ, ರೈತರ ಏಳಿಗೆಗೆ ಹೊಸ ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು. ಹೊಸ ಸಂಸತ್ ಭವನದ ಉದ್ಘಾಟನೆ ನನಗೆ ಹರ್ಷ ತಂದಿದೆ’ ಎಂದು ಸ್ವತಃ ರಾಷ್ಟ್ರಪತಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ ಎಂದರು.
ಕುಸ್ತಿಪಟುಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣ ನ್ಯಾಯಾಲಯದಲ್ಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಜರುಗಿಸಿದ್ದಾರೆ. ಪೊಲೀಸರು ಕೆಟ್ಟದಾಗಿ ನಡೆದುಕೊಳ್ಳಬಾರದು. ಕ್ರೀಡಾಪಟುಗಳು ಕೂಡ ಸಂಯಮದಿಂದ ವರ್ತಿಸಬೇಕು ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಬೆಲೆ ಹೆಚ್ಚಾಗಿದೆ. ಆದರೆ, ರೈತರಿಗೆ ಹಳೆ ದರದಲ್ಲಿ ರಸಗೊಬ್ಬರ ಒದಗಿಸುವುದಕ್ಕಾಗಿ ಕೇಂದ್ರ ಸರ್ಕಾರವು ₹2.50 ಲಕ್ಷ ಕೋಟಿ ಸಬ್ಸಿಡಿ ನೀಡಿದೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ ಮಾತನಾಡಿ,‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಒಂಬತ್ತು ವರ್ಷಗಳನ್ನು ಪೂರೈಸಿರುವುದರಿಂದ ಮನೆ ಮನೆ ಸಂಪರ್ಕ ಕಾರ್ಯಕ್ರಮ, ವ್ಯಾಪಾರಸ್ಥರ ಸಮ್ಮೇಳನ, ವಿಕಾಸ ತೀರ್ಥ, ಫಲಾನುಭವಿಗಳ ಸಮ್ಮೇಳನ, ಯೋಗ ದಿನ ಸೇರಿ ವಿವಿಧ ಕಾರ್ಯಕ್ರಮಗಳನ್ನು ಜೂನ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು. ಜೂ. 21ರಂದು ಪ್ರಧಾನಿ ವರ್ಚುವಲ್ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು. ಬೀದರ್ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 250 ಪ್ರಭಾವಿ ಕುಟುಂಬಗಳ ಸಂಪರ್ಕ ಕಾರ್ಯಕ್ರಮ ಜೂ. 23ರಿಂದ 30ರ ವರೆಗೆ ಜರುಗಲಿದೆ ಎಂದು ವಿವರಿಸಿದರು.
ಶಾಸಕ ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಮಾಧ್ಯಮ ಸಂಚಾಲಕ ಬಸವರಾಜ ಜೋಜನ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ ಗಾದಗಿ ಹಾಜರಿದ್ದರು.
‘ಪ್ರಸಕ್ತ ವರ್ಷ ಸಿಪೆಟ್ ತರಗತಿ ಆರಂಭ’ ‘ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ’ (ಸಿಪೆಟ್) ಕಾಲೇಜಿನ ತರಗತಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹಾಲಹಳ್ಳಿಯಲ್ಲಿರುವ ಬೀದರ್ ವಿಶ್ವವಿದ್ಯಾಲಯದಲ್ಲಿ ಆರಂಭವಾಗಲಿವೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು. ₹90 ಕೋಟಿ ವೆಚ್ಚದಲ್ಲಿ ಔರಾದ್ ತಾಲ್ಲೂಕಿನ ಬಲ್ಲೂರು (ಜೆ) ಗ್ರಾಮದಲ್ಲಿ ಕಾಲೇಜು ಮಂಜೂರಾಗಿದೆ. ಕೇಂದ್ರ ರಾಜ್ಯ ಸರ್ಕಾರಗಳು ಸಮಪಾಲು ಭರಿಸಬೇಕು. ಕೇಂದ್ರದ ಪಾಲು ಬಂದಿದೆ. ರಾಜ್ಯ ಸರ್ಕಾರದ ಪಾಲು ಬರಬೇಕಿದೆ. ಜಿಲ್ಲೆಯ ಇಬ್ಬರು ಸಚಿವರು ಇದಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.