ADVERTISEMENT

ಮನಸೂರೆಗೊಂಡ ನೂಪುರ ನೃತ್ಯೋತ್ಸವ

ನೃತ್ಯ, ಸಂಗೀತದಲ್ಲಿ ವಚನ ಸಾಹಿತ್ಯದ ಬಳಕೆ ಹೆಚ್ಚಾಗಲಿ–ಭಾಲ್ಕಿ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 8:55 IST
Last Updated 13 ಫೆಬ್ರುವರಿ 2024, 8:55 IST
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ನೂಪುರ ನೃತ್ಯೋತ್ಸವದಲ್ಲಿ ಉಷಾ ಪ್ರಭಾಕರ ಹಾಗೂ ತಂಡದವರು ಸಮೂಹ ನೃತ್ಯ ಪ್ರಸ್ತುತಪಡಿಸಿದರು
–ಪ್ರಜಾವಾಣಿ ಚಿತ್ರ
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ನೂಪುರ ನೃತ್ಯೋತ್ಸವದಲ್ಲಿ ಉಷಾ ಪ್ರಭಾಕರ ಹಾಗೂ ತಂಡದವರು ಸಮೂಹ ನೃತ್ಯ ಪ್ರಸ್ತುತಪಡಿಸಿದರು –ಪ್ರಜಾವಾಣಿ ಚಿತ್ರ   

ಬೀದರ್‌: ಇಲ್ಲಿನ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ನೂಪುರ ನೃತ್ಯ ಅಕಾಡೆಮಿಯ 24ನೇ ರಾಜ್ಯ ‘ನೂಪುರ ನೃತ್ಯೋತ್ಸವ’ ಸಭಿಕರ ಮನಸೂರೆಗೊಳಿಸಿತು.

ಅಕಾಡೆಮಿಯ ನಿರ್ದೇಶಕಿ ಉಷಾ ಪ್ರಭಾಕರ ಹಾಗೂ ಅವರ ತಂಡದವರು ಪ್ರಸ್ತುತಪಡಿಸಿದ ಸಮೂಹ ನೃತ್ಯ, ರಾಮಾಯಣದ ಸನ್ನಿವೇಶಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. 

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನೃತ್ಯ, ಸಂಗೀತ, ಜಾನಪದ ಕಲೆಗಳ ಪಾತ್ರ ಮಹತ್ವದ್ದಾಗಿದೆ. ವ್ಯಕ್ತಿಯ ವ್ಯಕ್ತಿಗತ ಬೆಳವಣಿಗೆ ಜೊತೆಗೆ ಸುಂದರ ಸಮಾಜದ ನಿರ್ಮಾಣಕ್ಕೂ ಸಹಕಾರಿಯಾಗಿವೆ ಎಂದರು.

ADVERTISEMENT

‘ಮನುಷ್ಯನ ಆರೋಗ್ಯಪೂರ್ಣ ಮಾನಸಿಕ ಬೆಳವಣಿಗೆ, ಸಮತೋಲಿತ ಆನಂದಮಯ ಜೀವನ ಶೈಲಿಗೆ, ಕೌಟುಂಬಿಕ ಸಾಮರಸ್ಯಕ್ಕಾಗಿ ನೃತ್ಯ, ಸಂಗೀತ ಮುಂತಾದ ಲಲಿತಕಲೆಗಳು ಅತಿ ಅವಶ್ಯಕ. ಮಕ್ಕಳ ಏಕಾಗ್ರತೆ ಹೆಚ್ಚಿಸಲು, ಅವರ ಸೃಜನಶೀಲ ಬುದ್ದಿವಂತಿಕೆಯ ವಿಕಾಸದಲ್ಲಿ ನೃತ್ಯ, ಸಂಗೀತಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ’ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ‘ವಚನ ಸಾಹಿತ್ಯವನ್ನು ಸಂಗೀತ ಮತ್ತು ನೃತ್ಯಕ್ಕೆ ಅಳವಡಿಸುವಲ್ಲಿ ಹೆಚ್ಚಿನ ಕೆಲಸಗಳಾಗಿಲ್ಲ. ಇದರ ಕಲಿಕೆಗೆ ಸರಿಯಾದ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಇದರಿಂದ ಆಸಕ್ತ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.

‘ವಚನ ಸಾಹಿತ್ಯವನ್ನು ಶಾಸ್ತ್ರೀಯ ನೃತ್ಯ, ಸಂಗೀತಗಳಲ್ಲಿ ಬಳಸಿಕೊಳ್ಳಬೇಕಾದ ಅಗತ್ಯವಿದೆ. ಅದರ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬಹುದಾಗಿದೆ. ಸಮಾನತೆಯ ಸಂದೇಶ ಪರಿಣಾಮಕಾರಿಯಾಗಿ ಸಾರಬಹುದಾಗಿದೆ. ಜಿಲ್ಲೆಯಲ್ಲಿ ವಚನ ಸಾಹಿತ್ಯವನ್ನು ನೃತ್ಯಕ್ಕೆ ಅಳವಡಿಸಿದ ಮೊದಲ ಶ್ರೇಯಸ್ಸು ಉಷಾ ಪ್ರಭಾಕರ ಅವರಿಗೆ ಸಲ್ಲುತ್ತದೆ. ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಬೀದರ್‌ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಅಭಿಷೇಕ ಆರ್ ಪಾಟೀಲ ಹುಮನಾಬಾದ್‌ ಮಾತನಾಡಿ, ‘ಬೀದರ್‌ ಜಿಲ್ಲೆಯ ಮಕ್ಕಳಿಗೆ ನೃತ್ಯಾಭ್ಯಾಸ ಮಾಡಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವುದು ಶ್ಲಾಘನೀಯ. ಈ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಬಹಳಷ್ಟಿದ್ದು, ಅದಕ್ಕೆ ಬೇಕಾದ ಪೂರಕ ವಾತಾವರಣದ ಅಗತ್ಯವಿದೆ. ಆ ನಿಟ್ಟಿನಲ್ಲಿ ನೂಪುರ ಅಕಾಡೆಮಿ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಹೊಗಳಿದರು.

ಹೈದರಾಬಾದ್‌ ಸಿಆರ್‌ಎಂ ಕಾಲೇಜಿನ ಸಹ ಪ್ರಾಧ್ಯಾಪಕ ಸುಧಾ ಅರವಿಂದ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಸಿದ್ರಮಪ್ಪ ಮಾಸಿಮಾಡೆ, ಕಪಲಾಪುರ ಹಿರೇಮಠದ ಗುಪ್ತಲಿಂಗೇಶ್ವರ ಸಾಧು ಮತ್ತು ಉಮಾಮಹೇಶ್ವರಿ ಮಣಗೆ, ಕಲಾವಿದ ನರಸಪ್ಪ, ಸುಭಾಷ ಧಿಮಾಕೆ, ಅಮರ ಕಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಅಖಿಲ ಭಾರತ ನಿರ್ಮಾಣ ಮತ್ತು ಸಿವಿಲ್‌ ಎಂಜಿನಿಯರ್‌ ಸಂಘದ ಅಧ್ಯಕ್ಷ ವೀರಶೆಟ್ಟಿ ಮಣಗೆ, ಡಾ.ನೀತಾ ರೆಜಂತಲ್‌, ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ, ಆಡಳಿತ ಮಂಡಳಿ ಸದಸ್ಯ ಬಿ. ಸುಬ್ರಹ್ಮಣ್ಯ ಪ್ರಭು, ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ, ಬಸವರಾಜ ರುದನೂರ, ರಘುರಾಮ ಉಪಾಧ್ಯ, ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್‌ ಸದಸ್ಯ ಪ್ರತಿಭಾ ಚಾಮಾ, ಸಾಮಾಜಿಕ ಕಾರ್ಯಕರ್ತೆ ಮಂಗಳಾ ಭಾಗವತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.