ಬೀದರ್: ಕೋವಿಡ್-19 ಅಪಾಯ ಭತ್ಯೆ ಹಾಗೂ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳ ಸಂಘದ ಸದಸ್ಯರು ಬೀದರ್‌ನ ಬ್ರಿಮ್ಸ್ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಶುಶ್ರೂಷಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಬ್ಯಾನರ್ ಹಿಡಿದು ಬ್ರಿಮ್ಸ್ ಪ್ರವೇಶ ದ್ವಾರದಲ್ಲೇ ಸಾಂಕೇತಿಕ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು.
ಎರಡು ವರ್ಷಗಳಿಂದ ಶುಶ್ರೂಷಾಧಿಕಾರಿಗಳು ಜೀವದ ಹಂಗು ತೊರೆದು ಅಹೋರಾತ್ರಿ ಕೋವಿಡ್ ಸೋಂಕಿತರ ಸೇವೆ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಸರ್ಕಾರ ನ್ಯಾಯಯುತವಾದ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೇಣುರಾಜ ಮನವಿ ಮಾಡಿದರು.
ರಾಜ್ಯ ಸರ್ಕಾರ 2020ರ ಫೆಬ್ರುವರಿ 24ರಂದು ಆದೇಶ ಮಾಡಿದಂತೆ ಮೊದಲ ಅಲೆಯಲ್ಲಿ ಆರು ತಿಂಗಳು ಕೆಲಸ ಮಾಡಿದ ಸಿಬ್ಬಂದಿಗೆ ತಲಾ 78 ಸಾವಿರ ಬಿಡುಗಡೆ ಮಾಡಬೇಕು. ಈ ಮೂಲಕ ಶುಶ್ರೂಷಾಧಿಕಾರಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಕುಟುಂಬದವರೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಉತ್ತಮ ಸೇವೆ ಕೊಡುವಲ್ಲಿ ಶುಶ್ರೂಷಾಧಿಕಾರಿಗಳು ಹಿಂದೆ ಬಿದ್ದಿಲ್ಲ. ಪ್ರಾಮಾಣಿಕವಾಗಿ ಸೇವೆ ಮಾಡಿ ಸರ್ಕಾರದ ಬಳಿ ನ್ಯಾಯ ಕೇಳುತ್ತಿದ್ದಾರೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಪ್ರಕಾಶ ಬಿ, ಕಾರ್ಯಾಧ್ಯಕ್ಷ ಯಶವಂತ ಗಾದಗಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಭಿಮನ್ಯು, ಉಪಾಧ್ಯಕ್ಷ ಸಂತೋಷಕುಮಾರ ಸಿ. ರಾಜಶೇಖರ, ಸಹ ಕಾರ್ಯದರ್ಶಿ ಶರಣಬಸಪ್ಪ, ಕೋಶಾಧ್ಯಕ್ಷ ನರಸಿಂಗ್ ಕೆ. ರಾಘವೇಂದ್ರ, ಆನಂದ, ಸಂತೋಷ, ವಿಷ್ಣು ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.