ADVERTISEMENT

ಔರಾದ್ | ರೈತ ಸಂಪರ್ಕ ಕೇಂದ್ರಕ್ಕೆ ಅಧಿಕಾರಿಗಳಿಂದಲೇ ಬೀಗ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 15:39 IST
Last Updated 6 ಜೂನ್ 2024, 15:39 IST
ಔರಾದ್ ತಾಲ್ಲೂಕಿನ ಸಂತಪುರ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಲಾಗಿದೆ
ಔರಾದ್ ತಾಲ್ಲೂಕಿನ ಸಂತಪುರ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಲಾಗಿದೆ   

ಔರಾದ್: ಬಿತ್ತನೆ ಸಮಯದಲ್ಲಿ ರೈತರಿಗೆ ಸಲಹೆ ಸಹಕಾರ ನೀಡಬೇಕಾದ ತಾಲ್ಲೂಕಿನ ಸಂತಪುರ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರಕ್ಕೆ ಅಧಿಕಾರಿಗಳೇ ಬೀಗ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಲ ರೈತರು, ಗುರುವಾರ ಸಂತಪುರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದಾಗ ಕಚೇರಿ ಮುಖ್ಯ ದ್ವಾರಕ್ಕೆ ಬೀಗ ಹಾಕಿರುವುದು ಕಂಡು ಬಂದಿದೆ. 6ರಿಂದ 11ರ ವರೆಗೆ ಸಂತಪುರ ಆರ್‌ಎಸ್‌ಕೆ ಮುಚ್ಚಿರುತ್ತದೆ ಎಂದು ಮುಖ್ಯದ್ವಾರದ ಪಕ್ಕದ ಗೋಡೆ ಮೇಲೆ ಚೀಟಿಯೊಂದನ್ನು ಬರೆದು ಅಂಟಿಸಲಾಗಿದೆ.

‘ಅಧಿಕಾರಿಗಳು, ಈ ರೀತಿ ಕಚೇರಿಗೆ ಬೀಗ ಹಾಕಿ, ಒಂದು ವಾರದವರೆಗೆ ಯಾರು ಬರಬೇಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಸಂತಪುರ ನಿವಾಸಿ ಸಾಯಿಕುಮಾರ ಘೋಡ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಂತಪುರ ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರ. ಅದು ಈಗ ಬಿತ್ತನೆ ಸಮಯ. ಇಂತಹ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಯಾರೂ ಇರದೆ ಬೀಗ ಹಾಕಿರುವುದನ್ನು ನೋಡಿದರೆ ಇಲ್ಲಿಯ ಅಧಿಕಾರಿಗಳಿಗೆ ಯಾರು ಹೇಳುವವರು ಕೇಳುವವರು ಇಲ್ಲವಾಗಿದೆ. ಈ ವಿಷಯ ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಂಬಂಧಿತರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಸಂತಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹಾಗೂ ಸಿಬ್ಬಂದಿ ಕೌಠಾ(ಬಿ) ಗ್ರಾಮಕ್ಕೆ ಬಿತ್ತನೆ ಬೀಜ ವಿತರಿಸಲು ಹೋಗಿದ್ದಾರೆ. ಹೀಗಾಗಿ ಅಲ್ಲಿ ಯಾರೂ ಇಲ್ಲದ ಕಾರಣಕ್ಕೆ ಮುಚ್ಚಿರಬಹುದು. ಹೀಗಾಗಿ ಬೇರೊಬ್ಬ ಸಿಬ್ಬಂದಿಯನ್ನು ಕಳಹಿಸಿ, ಕಚೇರಿ ತೆರೆಯಿಸಲಾಗುವುದು’ ಎಂದು ಸಹಾಯಕ ಕೃಷಿ ನಿರ್ದೇಶಕ ಧುಳಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.