ADVERTISEMENT

17ರಂದು ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ: ಬಸವಲಿಂಗ ಪಟ್ಟದ್ದೇವರು

ಬಸವಲಿಂಗ ಪಟ್ಟದ್ದೇವರು ಮನವಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 15:55 IST
Last Updated 14 ಫೆಬ್ರುವರಿ 2024, 15:55 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಬೀದರ್: ರಾಜ್ಯ ಸರ್ಕಾರವು ಈಗಾಗಲೇ ‘ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದೆ. ಹಾಗೆಯೇ ಫೆ. 17ರಂದು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸುತ್ತಿರುವುದು ಬಹಳ ಸಂತಸ ತಂದಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ನುಡಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಂದು ಬೆಳಿಗ್ಗೆ ಜಿಲ್ಲೆಯ ಪ್ರತಿಯೊಂದು ಗ್ರಾಮಗಳ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಬೇಕು. ಅಲ್ಲದೇ ಪ್ರತಿಯೊಬ್ಬರೂ ಅಂದು ತಮ್ಮ ಮನೆಗಳಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಚನಗಳ ಪಠಣ ಮಾಡಬೇಕು’ ಎಂದು ಮನವಿ ಮಾಡಿದರು.

‘ಜಗತ್ತಿಗೆ ಸಮಾನತೆಯ ಸಂದೇಶ ಸಾರಿದವರು ಬಸವಣ್ಣನವರು. ಅಲ್ಲದೇ ಬಸವಾದಿ ಶರಣರ ವಚನಗಳು ಹಿಂದೆ, ಇಂದು ಹಾಗೂ ಮುಂದೆಯೂ ಪ್ರಸ್ತುತವಾಗಿರಲಿವೆ’ ಎಂದರು.

ADVERTISEMENT

ಅಕ್ಕ ಗಂಗಾಂಬಿಕೆ ಮಾತನಾಡಿ, ‘12ನೇಯ ಶತಮಾನದಲ್ಲಿಯೇ ಬಸವಣ್ಣನವರು ಮಹಿಳೆಯರಿಗೆ ಸಮಾನತೆ ಕಲ್ಪಿಸಿಕೊಟ್ಟಿದ್ದರು. ಕಾಯಕ, ದಾಸೋಹವನ್ನು ಬೋಧಿಸಿದರು. 17ರಂದು ಎಲ್ಲರೂ ಹಬ್ಬದಂತೆ ಆಚರಿಸಬೇಕು’ ಎಂದು ತಿಳಿಸಿದರು.

ಗೋರ್ಟಾ ಲಿಂಗಾಯತ ಮಹಾಮಠದ ಪ್ರಭುದೇವರು, ಬಿ.ಜಿ. ಶೆಟಕಾರ, ಬಾಬು ವಾಲಿ, ಸೋಮಶೇಖರ ಪಾಟೀಲ, ಆನಂದ ದೇವಪ್ಪ, ಶರಣಪ್ಪ ಮಿಠಾರೆ, ಸುರೇಶ ಚನಶೆಟ್ಟಿ, ಶಿವಶಂಕರ ಟೋಕರೆ, ಗಣೇಶ ಬಿರಾದಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.