ಗುರುಪ್ರಸಾದ ಮೆಂಟೇ
ಹುಲಸೂರ: ತಾಲ್ಲೂಕಿನ ಮೇಹಕರ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದರಿಂದಾಗಿ ವಿಭಾಗ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ಸುತ್ತಮುತ್ತಲಿನ 20 ಗ್ರಾಮಗಳಿಗೆ ಒಂದೇ ಸರ್ಕಾರಿ ಕಾಲೇಜು ಇದೆ. ಕಳೆದ ವರ್ಷ ಒಟ್ಟು 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ ಈ ವರ್ಷ ಕೇವಲ ಇಬ್ಬರು ಪ್ರವೇಶ ಪಡೆದಿದ್ದಾರೆ.
ಈ ಕಾಲೇಜು ಆರಂಭಗೊಂಡು 15 ರಿಂದ 20 ವರ್ಷ ಕಳೆದಿದ್ದರೂ ಮೂಲ ಸೌಕರ್ಯ ಇಲ್ಲ. ಐವರು ಉಪನ್ಯಾಸಕರಿದ್ದಾರೆ.
ಇದರಲ್ಲಿ ಕನ್ನಡ ಹಾಗೂ ಇತಿಹಾಸ ಉಪನ್ಯಾಸಕರು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕೊರತೆ ಕಾರಣಕ್ಕೆ ತರಗತಿಗಳು ನಿಯಮಿತವಾಗಿ ನಡೆಯುವುದಿಲ್ಲ.
ಈ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ. ಆದ್ದರಿಂದ ನಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಿಲ್ಲ ಎಂದು ಸ್ಥಳೀಯ ಪಾಲಕರು ಹೇಳಿದರು.
ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈ ಕಡೆ ಗಮನಹರಿಸಿ ಸಮಸ್ಯ ಬಗೆಹರಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.
Quote - ಸಮಸ್ಯೆ ಹೀಗೆಯೇ ಮುಂದುವರಿದರೆ ವಿಭಾಗ ಮುಚ್ಚಿ ಹೋಗುತ್ತದೆ. ಇದರಿಂದ ನಮ್ಮ ಮಕ್ಕಳನ್ನು ದೂರದ ಕಾಲೇಜಿಗೆ ಸೇರಿಸಬೇಕಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳನ್ನು ಕಲಾ ವಿಭಾಗಕ್ಕೆ ದಾಖಲು ಮಾಡಬೇಕು ಪ್ರಮೋದ್ ತೇಲಂಗ ಶಿಕ್ಷಣ ಪ್ರೇಮಿ
Quote - ಗಡಿ ಭಾಗದಲ್ಲಿ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಗಡಿಭಾಗದ ಹಳ್ಳಿ ಹಾಗೂ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಅದಕ್ಕೆ ಅಧ್ಯಕ್ಷರು ಕೆಲ ಸಿಬ್ಬಂದಿ ಕೂಡ ಇದ್ದಾರೆ. ಆದರೆ ಈ ಕಡೆ ಗಮನ ಹರಿಸುತ್ತಿಲ್ಲ ರಮೇಶ ಸ್ವಾಮಿ ಸ್ಥಳೀಯ
Quote - ಕಾಲೇಜಿನಲ್ಲಿ ಪ್ರವೇಶ ಪಡೆಯಿರಿ ಎಂದು ವಿದ್ಯಾರ್ಥಿಗಳ ಮನವೊಲಿಸಲಾಗುತ್ತಿದೆ. ದಾಖಲಾತಿ ಪ್ರಮಾಣ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಅರ್ಜಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಲಾಗುವುದು ಚಂದ್ರಕಾಂತ ಶಾಬದಕರ್ ಉಪನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.