ಮಾಳೆಗಾಂವ್(ಜನವಾಡ): ಗ್ರಾಮ ಪಂಚಾಯಿತಿಯ ವಿಶೇಷ ಆಸಕ್ತಿ ಫಲವಾಗಿ ಬೀದರ್ ತಾಲ್ಲೂಕಿನ ಮಾಳೆಗಾಂವ್ ಗ್ರಾಮದಲ್ಲಿ ಈಗ ಓಪನ್ ಜಿಮ್ ತಲೆ ಎತ್ತಿದೆ.
ಅಮೃತ ಯೋಜನೆ ಪ್ರೋತ್ಸಾಹ ಧನದ ₹6.22 ಲಕ್ಷ ವೆಚ್ಚದಲ್ಲಿ ಜಿಮ್ ನಿರ್ಮಿಸಲಾಗಿದೆ.
ಜಿಮ್‍ನಲ್ಲಿ ಎರಡು ಆಸನದ ಜೋಕಾಲಿ, ತೋಳಿನ ಚಕ್ರ, ಕುಳಿತುಕೊಳ್ಳುವ ನಿಲ್ದಾಣ, ಏರ್ ವಾಕರ್, ಡಬ್ಬಲ್ ಕ್ರಾಸ್ ವಾಕರ್, ಏರ್ ಸ್ವಿಂಗ್, ಹಾರ್ಸ್ ರೈಡರ್, ಟ್ವಿಸ್ಟರ್, ವರ್ಟಿಕಲ್ ನೀ ಹಿಪ್ ರೈಸ್, ಕ್ಲಂಬರ್, 12 ಅಡಿಯ ಜಾರು ಬಂಡಿ ಮೊದಲಾದವು ಇವೆ.
ಅಮೃತ ಯೋಜನೆಯಡಿ ಪಂಚಾಯಿತಿಗೆ ₹25 ಲಕ್ಷ ಪ್ರೋತ್ಸಾಹ ಧನ ಬಂದಿತ್ತು. ಅದರಲ್ಲಿ ಜಿಮ್ ಸ್ಥಾಪಿಸಲಾಗಿದೆ. ಜಿಮ್‍ನಲ್ಲಿ ಜನರಿಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನೆರವಾಗಲು ವ್ಯಾಯಾಮ ಸಲಕರಣೆ ಹಾಗೂ ಮಕ್ಕಳ ಮನೋರಂಜನೆ ಸಲಕರಣೆಗಳನ್ನು ಅಳವಡಿಸಲಾಗಿದೆ. ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ ಎಂದು ಮಾಳೆಗಾಂವ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಚಿಟ್ಟಾ ತಿಳಿಸಿದರು.
ಇನ್ನೂ ಜಿಮ್ ಉದ್ಘಾಟನೆ ಆಗಿಲ್ಲ. ಆಗಲೇ ಸಾರ್ವಜನಿಕರು ಹಾಗೂ ಮಕ್ಕಳು ಇದರ ಸದುಪಯೋಗ ಪಡೆಯಲಾರಂಭಿಸಿದ್ದಾರೆ. ಶೀಘ್ರದಲ್ಲೇ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇದರೊಂದಿಗೆ ಉದ್ಯಾನ, ನವೀಕೃತ ಡಿಜಿಟಲ್ ಗ್ರಂಥಾಲಯಗಳ ಉದ್ಘಾಟನೆಯೂ ನೆರವೇರಲಿದೆ ಎಂದು ಹೇಳಿದರು.
ಪಂಚಾಯಿತಿ ಓಪನಗಗ ಜಿಮ್ ಆರಂಭಿಸುವುದಕ್ಕೆ ಸೀಮಿತವಾಗಿಲ್ಲ. ಅದಕ್ಕೆ ಹೊಂದಿಕೊಂಡೇ ಜನರಿಗೆ ವಾಯು ವಿಹಾರಕ್ಕಾಗಿ ಪಂಚಾಯಿತಿ ಸ್ಥಳದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂದದ ಉದ್ಯಾನ ನಿರ್ಮಿಸಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಜ್ಞಾನದ ಹಸಿವು ತಣಿಸುವ ಡಿಜಿಟಲ್ ಗ್ರಂಥಾಲಯವನ್ನು ನವೀಕರಿಸಿದೆ. ಶಾಲೆಯ ಆಸ್ತಿ ಹಾಗೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ.
ಖಾತ್ರಿ ಯೋಜನೆಯಡಿ ₹ 8 ಲಕ್ಷ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗಿದೆ. ಅದರೊಳಗೆ ಹುಲ್ಲು ಹಾಸಿದ್ದು, ಆಲಂಕಾರಿಕ ಸಸಿಗಳನ್ನು ನೆಡಲಾಗಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ₹ 2 ಲಕ್ಷ ವೆಚ್ಚದಲ್ಲಿ 20 ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಸೂಲಾಬಾದ್‍ನಲ್ಲಿ ಸೌರಶಕ್ತಿ ಚಾಲಿತ ಬೀದಿ ದೀಪ ಅಳವಡಿಸಿದ್ದರಿಂದ ಪಂಚಾಯಿತಿಗೆ ಮಾಸಿಕ ₹ 20 ಸಾವಿರ ವಿದ್ಯುತ್ ಬಿಲ್ ಉಳಿತಾಯ ಆಗುತ್ತಿದೆ ಎಂದು ಅನಿಲಕುಮಾರ ಚಿಟ್ಟಾ ತಿಳಿಸಿದರು.
ಮಾಳೆಗಾಂವ್ ಕೆರೆಯನ್ನು ಪಿಕ್‍ನಿಕ್ ತಾಣವಾಗಿಸಲು ಯೋಜಿಸಲಾಗಿದೆ. ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡುವ ಉದ್ದೇಶ ಇದೆ. ಕೆರೆ ಪ್ರದೇಶದಲ್ಲಿ ವಿವಿಧ ಕೆಲಸ ನಡೆದಿವೆ.
-ಅನಿಲಕುಮಾರ ಚಿಟ್ಟಾ ಮಾಳೆಗಾಂವ್ ಪಿಡಿಒ
ಶಾಲೆಯ ಮನವಿಗೆ ಸ್ಪಂದಿಸಿ ಪಂಚಾಯಿತಿಯವರು ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಇದರಿಂದ ಮಕ್ಕಳು ಹಾಗೂ ಪಾಲಕರಲ್ಲಿ ಸುರಕ್ಷತೆ ಭಾವ ಮೂಡಿದೆ.
-ಮಹ್ಮಮದ್ ರಿಹಾನ್ ಸಯೀದ್ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ
ತೆರೆದ ಜಿಮ್‍ನಿಂದ ಸಾರ್ವಜನಿಕರಿಗೆ ನಿತ್ಯ ವ್ಯಾಯಾಮಕ್ಕೆ ಅನುಕೂಲವಾಗಲಿದೆ. ಗ್ರಾಮಕ್ಕೆ ಇದ್ದ ಉದ್ಯಾನದ ಕೊರಗು ಕೂಡ ಈಗ ದೂರವಾಗಿದೆ.
-ಆನಂದ ರೆಡ್ಡಿ ಮಾಳೆಗಾಂವ್ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.