ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದಲ್ಲಿ ಗುರುವಾರ ನಡೆದ ಶ್ರೀರಾಮ ನವಮಿಯ ಮೆರವಣಿಗೆಯಲ್ಲಿನ ಮೂರ್ತಿಯ ತೊಡೆಯ ಮೇಲೆ ಶಾಸಕ ಶರಣು ಸಲಗರ ನಿಂತಿರುವುದು ವ್ಯಾಪಕ ಚರ್ಚೆಗೆ ಮತ್ತು ಟೀಕೆಗೆ ಒಳಗಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ಅನೇಕರು ಹಂಚಿಕೊಂಡು ಬಿಜೆಪಿಯವರ ರಾಮಭಕ್ತಿ ಇದೇನಾ ಎಂದು ಪ್ರಶ್ನಿಸಿದ್ದಾರೆ. ನಗರದ ಕಾಳಿ ಗಲ್ಲಿಯಿಂದ ಮೆರವಣಿಗೆ ಆರಂಭವಾದಾಗ ಶಾಸಕರು ಪ್ಲಾಸ್ಟರ್‌ನ ಎತ್ತರದ ಶ್ರೀರಾಮ ಮೂರ್ತಿಗೆ ಮಾಲಾರ್ಪಣೆ ಮಾಡುವಾಗ ತೊಡೆಯ ಮೇಲೆ ಏರಿ ನಿಂತಿದ್ದಾರೆ. ಮಾಲಾರ್ಪಣೆ ನಂತರ ಅಲ್ಲಿಯೇ ನಿಂತು ಭಕ್ತರಿಗೆ ಕೈ ಜೋಡಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಧನರಾಜ ತಾಳಂಪಳ್ಳಿ ಕೂಡ ಈ ಬಗ್ಗೆ ಫೇಸ್ ಬುಕ್ ನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕಾರ್ಯಕ್ರಮ ಸಮಿತಿಯವರು ಮಾಲೆ ಹಾಕುವುದಕ್ಕೆ ಮೇಲೇರಲು ಯತ್ನಿಸಿದರು. ಆದರೆ ಅವರಿಗೆ ಸಾಧ್ಯ ಆಗದಿದ್ದಾಗ ಸಮಿತಿಯವರ ಅನುಮತಿ ಪಡೆದೇ ಶಾಸಕರು ಮೇಲೇರಿದ್ದಾರೆ ಎಂದು ಅವರ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ಕೆಲವರು ತಮ್ಮ ಫೇಸ್‌ಬುಕ್ ಗಳಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.