ADVERTISEMENT

ಖಾಸಗಿ ಕಾರ್ಖಾನೆಯಿಂದ ಬ್ರಿಮ್ಸ್‌ನಲ್ಲಿ ಆಮ್ಲಜನಕ ಘಟಕ

​ಪ್ರಜಾವಾಣಿ ವಾರ್ತೆ
Published 12 ಮೇ 2021, 5:41 IST
Last Updated 12 ಮೇ 2021, 5:41 IST

ಬೀದರ್: ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿ ಇರುವ ಸಾಯಿ ಫಾರ್ಮಾ ಇಂಡಸ್ಟ್ರೀಸ್ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ 5 ಕಿಲೋ ಲೀಟರ್ ಸಂಗ್ರಹ ಸಾಮರ್ಥ್ಯದ ಆಮ್ಲಜನಕ ಘಟಕ ನಿರ್ಮಿಸಲು ಮುಂದಾಗಿದೆ.

ಕಾರ್ಖಾನೆಯವರು ತಮ್ಮ ಸ್ವಂತ ಹಣದಲ್ಲಿ ಘಟಕ ನಿರ್ಮಾಣ ಮಾಡಿಕೊಡಲು ಆಸಕ್ತಿ ತೋರಿದ್ದಾರೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ.

ಘಟಕದ ನಿರ್ಮಾಣದ ನಂತರ ಬ್ರಿಮ್ಸ್ ಆಸ್ಪತ್ರೆಯ ಆಮ್ಲಜನಕ ಸಂಗ್ರಹ ಸಾಮರ್ಥ್ಯ 19 ಕಿಲೋ ಲೀಟರ್‌ಗೆ ಹೆಚ್ಚಲಿದೆ. ಇದರಿಂದ ಆಸ್ಪತ್ರೆಯ ಬೆಡ್‍ಗಳ ಸಂಖ್ಯೆ ವೃದ್ಧಿಸಿ, ಇನ್ನೂ ಹೆಚ್ಚಿನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಸಹಾಯ ಆಗಲಿದೆ ಎಂದು ಹೇಳಿದ್ದಾರೆ.

ADVERTISEMENT

ಆಮ್ಲಜನಕ ಕೊರತೆ ನೀಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಹೊಸ ಆಕ್ಸಿಜನ್ ಜನರೇಷನ್ ಪ್ಲಾಂಟ್‍ಗಳನ್ನು ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಆಮ್ಲಜನಕ ರಿಫಿಲ್ಲಿಂಗ್ ಘಟಕ ಸ್ಥಾಪನೆಗೆ ಈಗಾಗಲೇ ಕರ್ನಾಟಕ ಗ್ಯಾಸ್ ಏಜೆನ್ಸಿಯೊಂದಿಗೆ ಒಡಂಬಡಿಕೆ ಮಡಿಕೊಳ್ಳಲಾಗಿದೆ. ಆದಷ್ಟು ಬೇಗ ಈ ಕೆಲಸ ಆಗಲಿದೆ ಎಂದು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಉಂಟಾದಲ್ಲಿ ಅದನ್ನು ನಿಭಾಯಿಸಲು ಕ್ವಿಕ್ ರೆಸ್ಪಾನ್ಸ್ ಟೀಮ್ ರಚಿಸಲಾಗಿದೆ. ಅಂತಹ ಆಸ್ಪತ್ರೆಗಳಿಗೆ ಸೇಡಂನಿಂದ ಬರುವ ಸಿಲಿಂಡರ್‌ಗಳ ಪೈಕಿ ಒಂದೆರಡನ್ನು ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಆಮ್ಲಜನಕ ಹಾಗೂ ಔಷಧಿ ಕೊರತೆಯಾಗದಂತೆ ನೋಡಿಕೊಳ್ಳುವುದು ಖಾಸಗಿ ಆಸ್ಪತ್ರೆಗಳ ಜವಾಬ್ದಾರಿ. ಈ ವಿಷಯದಲ್ಲಿ ವೈಫಲ್ಯ ಕಾಣುವ ಆಸ್ಪತ್ರೆಗಳ ಅನುಮೋದನೆ ರದ್ದುಪಡಿ ಸಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.