ADVERTISEMENT

ಬೀದರ್‌: ಪಾಪನಾಶ ಕೆರೆಗೆ ಕೊಳೆಯ ಪಾಪ

ಕೆರೆಯಂಗಳಕ್ಕೆ ಬೇಕಾಬಿಟ್ಟಿ ತ್ಯಾಜ್ಯ ತಂದು ಸುರಿಯುತ್ತಿರುವ ಜನ; ಮಲಿನವಾದ ಕೆರೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ನವೆಂಬರ್ 2024, 4:36 IST
Last Updated 6 ನವೆಂಬರ್ 2024, 4:36 IST
ಪಾಪನಾಶ ಕೆರೆಯಲ್ಲಿ ತ್ಯಾಜ್ಯದ ರಾಶಿ
ಪಾಪನಾಶ ಕೆರೆಯಲ್ಲಿ ತ್ಯಾಜ್ಯದ ರಾಶಿ   

ಬೀದರ್‌: ಹಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿರುವ ನಗರದ ಪಾಪನಾಶ ಕೆರೆ ಈಗ ತನ್ನ ಅಂದ ಕಳೆದುಕೊಳ್ಳುತ್ತಿದೆ.

ಕೆರೆಯ ಪರಿಸರದಲ್ಲಿ ಓಡಾಡುತ್ತಿದ್ದರೆ ಮಲೆನಾಡಿನಲ್ಲಿದ್ದಂತೆ ಭಾಸವಾಗುತ್ತದೆ. ಒತ್ತಡದ ಬದುಕಿನಿಂದ ಸ್ವಲ್ಪ ದೂರವಿದ್ದು, ಜನ ಹಸಿರಿನ ಮಧ್ಯೆ ಕೆಲಕಾಲ ಕಳೆದು ಹೊಸ ಚೈತನ್ಯದೊಂದಿಗೆ ಮರಳಲು ಈ ಕೆರೆಗೆ ಭೇಟಿ ಕೊಡುತ್ತಾರೆ. ಇದೇ ಪರಿಸರದಲ್ಲಿ ಪಾಪನಾಶ ಶಿವಲಿಂಗ ದೇವಸ್ಥಾನವಿದೆ. ಇಲ್ಲಿಗೆ ಭೇಟಿ ಕೊಟ್ಟು ಜನ ಪಾಪ ಕಳಚಿಕೊಳ್ಳುತ್ತಾರೆ. ಆದರೆ, ಜನರೇ ಈಗ ಕೆರೆಗೆ ತ್ಯಾಜ್ಯ ಸುರಿದು ಪಾಪದ ಕೆಲಸ ಮಾಡುತ್ತಿದ್ದಾರೆ. ಇನ್ನು, ಸೂಕ್ತ ನಿರ್ವಹಣೆಯಿಲ್ಲದೆ ಕೆರೆ ಬಡವಾಗುತ್ತಿದೆ.

ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಪೂಜೆಗೆ ಬಳಸಿದ ವಸ್ತುಗಳೆಲ್ಲ ಈಗ ಕೆರೆ ಪಾಲಾಗಿವೆ. ಗಣೇಶನ ಮೂರ್ತಿಗಳು, ದೇವಿ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜಿಸಲಾಗಿದೆ. ಪೂಜೆಗೆ ಬಳಸಿದ ಹೂ, ಹಣ್ಣು, ಬಾಳೆದಿಂಡು, ಕಬ್ಬು ಹಾಗೂ ಅಲಂಕಾರಿಕ ವಸ್ತುಗಳನ್ನು ಕೆರೆಯಂಗಳದಲ್ಲಿ ಚೆಲ್ಲಲಾಗಿದೆ. ಕೆರೆ ತುಂಬೆಲ್ಲಾ ತ್ಯಾಜ್ಯದ ರಾಶಿ ಹರಡಿಕೊಂಡು ಎಲ್ಲೆಡೆ ದುರ್ಗಂಧಕ್ಕೆ ಕಾರಣವಾಗಿದೆ.

ADVERTISEMENT

ಸ್ವಚ್ಛಂದವಾಗಿ ನೀರಿನಲ್ಲಿ ವಿಹರಿಸುತ್ತಿದ್ದ ಜಲಚರಗಳು, ಪಕ್ಷಿಗಳಿಗೆ ಸಂಕಷ್ಟ ಎದುರಾಗಿದೆ. ಪ್ಲಾಸ್ಟಿಕ್‌ ಹಾಗೂ ಇತರೆ ವಸ್ತುಗಳಿಂದ ಅವುಗಳಿಗೆ ತೊಂದರೆ ಉಂಟಾಗಿದೆ. ವಾಯು ವಿಹಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂಥ ಪರಿಸ್ಥಿತಿ. ಆದರೆ, ಅದನ್ನು ಲೆಕ್ಕಿಸದೆ ಜನ ನಿರಂತರವಾಗಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಅವರನ್ನು ಯಾರೂ ತಡೆಯುವವರು ಇಲ್ಲ.

ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ₹2 ಕೋಟಿ ಅನುದಾನದಲ್ಲಿ ಇತ್ತೀಚೆಗಷ್ಟೇ ಕೆರೆ ಅಭಿವೃದ್ಧಿ ಪಡಿಸಲಾಗಿದೆ. 1.2 ಕಿ.ಮೀ 10 ಅಡಿ ಅಗಲದ ‘ಪಾತ್‌ ವೇ’ ನಿರ್ಮಿಸಲಾಗಿದೆ. ಕೆಳಗಡೆ ಕಾಂಕ್ರೀಟ್‌ ಬೆಡ್‌ ಹಾಕಿ, ಮೇಲ್ಭಾಗದಲ್ಲಿ 9X9 ಗಾತ್ರದ ಕೆಂಪು ಕಲ್ಲುಗಳಿಂದ ಪಥ ನಿರ್ಮಿಸಲಾಗಿದೆ. ಕೆಂಪು ಮಣ್ಣು ಇರುವುದರಿಂದ ಕೆಳಗೆ ಕುಸಿಯದಿರಲಿ ಎಂಬ ಕಾರಣಕ್ಕೆ ಭಾರಿ ತೂಕದ, ಗಟ್ಟಿಮುಟ್ಟಾದ ಕಲ್ಲುಗಳನ್ನು ಬಳಸಲಾಗಿದೆ.

ಕೆರೆಯಂಚಿನುದ್ದಕ್ಕೂ ಗ್ರಿಲ್‌ ಅಳವಡಿಸಲಾಗಿದೆ. ವಿದ್ಯುತ್‌ ದೀಪಗಳನ್ನು ಕೂರಿಸಲಾಗಿದೆ. ನಿರ್ಮಿತಿ ಕೇಂದ್ರದವರು ಕಾಮಗಾರಿ ಮುಗಿಸಿ, ನಗರಸಭೆಗೆ ಒಪ್ಪಿಸಿದ್ದಾರೆ. ಆದರೆ, ಅಲ್ಲಿ ಯಾರೊಬ್ಬರೂ ಇರದ ಕಾರಣ ಜನ ಮನಬಂದಂತೆ ವರ್ತಿಸುತ್ತ, ಎಲ್ಲೆಂದರಲ್ಲಿ ಕಸ ಹಾಕಿ ಹೋಗುತ್ತಿದ್ದಾರೆ. ಇನ್ನು, ದಟ್ಟ ಅರಣ್ಯ ಇರುವುದರಿಂದ ಸುರಕ್ಷತೆಗೆ ಪೊಲೀಸ್‌ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ಆದರೆ, ಅಲ್ಲಿ ಯಾರೂ ಕೂಡ ಭದ್ರತೆಗೆ ಇರುವುದಿಲ್ಲ ಎಂದು ವಾಯು ವಿಹಾರಿಗಳು ಆರೋಪಿಸಿದ್ದಾರೆ.

ಸುಮಾರು 27 ಎಕರೆ ಪ್ರದೇಶದಲ್ಲಿ ಈ ಕೆರೆ ಇದೆ. ಸುತ್ತಲೂ ದಟ್ಟವಾದ ಕಾಡು, ಕೆರೆಯಂಚಿನಲ್ಲಿ ಸಾಲು ತೆಂಗಿನ ಮರಗಳು. ಪಕ್ಷಿಗಳ ಚಿಲಿಪಿಲಿ ಸದ್ದು ಎಲ್ಲ ರೀತಿಯ ಜಂಜಾಟವನ್ನು ಮರೆಸುತ್ತದೆ. ಅನೇಕ ಪ್ರಭೇದದ ಪಕ್ಷಿ ಸಂಕುಲ ಇದರ ಪರಿಸರದಲ್ಲಿ ನೆಲೆಸಿವೆ. ಪಾಪನಾಶ ಶಿವಲಿಂಗ ದೇವಸ್ಥಾನ, ಬಸವಗಿರಿ ಇದೇ ಪರಿಸರದಲ್ಲಿದೆ. ನಗರದ ಹೃದಯ ಭಾಗದಲ್ಲಿದ್ದರೂ ಯಾವುದೋ ಕಾಡಿನಲ್ಲಿರುವಂತಹ ಅನುಭವ ಈ ಸ್ಥಳದಲ್ಲಿ ಓಡಾಡಿದರೆ ಆಗುತ್ತದೆ. ಇಂತಹ ಉತ್ತಮ ಸ್ಥಳ ಕಣ್ಣೆದುರೇ ಹಾಳಾಗುತ್ತಿದ್ದರೂ ರಕ್ಷಣೆಗೆ ಮುಂದಾಗುತ್ತಿಲ್ಲ ಎನ್ನುವುದು ಪರಿಸರ ಪ್ರಿಯರ ಕೊರಗು.

ಈ ಸಂಬಂಧ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಬೀದರ್‌ ನಗರದಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿ ಕೊರತೆ ಇದೆ. ಇನ್ನು, ಪಾಪನಾಶ ಕೆರೆಗೆಂದೇ ಪ್ರತ್ಯೇಕ ಸಿಬ್ಬಂದಿ ನಿಯೋಜಿಸುವುದು ಕಷ್ಟವಾಗುತ್ತದೆ. ಕೆರೆ ನಮ್ಮದು ಎಂಬ ಭಾವನೆ ಜನರಲ್ಲಿ ಬರಬೇಕು. ಜನ ತ್ಯಾಜ್ಯ ತಂದು ಸುರಿಯದಿದ್ದರೆ ಇಡೀ ಪರಿಸರ ಸ್ವಚ್ಛವಾಗಿರುತ್ತದೆ. ಎಲ್ಲರೂ ಅವರವರ ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ಹೇಳಿದರು.

ಮೈದುಂಬಿಕೊಂಡಿರುವ ಪಾಪನಾಶ ಕೆರೆ
ಕೆರೆ ಅಂಗಳದಲ್ಲಿ ತೇಲಾಡುತ್ತಿರುವ ದೇವರ ಮೂರ್ತಿ ಪೂಜಾ ವಸ್ತುಗಳು –ಪ್ರಜಾವಾಣಿ ಚಿತ್ರಗಳು: ಶಶಿಕಾಂತ ಎಸ್‌. ಶೆಂಬೆಳ್ಳಿ
ಪಾಪನಾಶ ಕೆರೆಯ ಪರಿಸರವನ್ನು ಅಭಿವೃದ್ಧಿ ಪಡಿಸಿದ ನಂತರ 2024ರ ಫೆಬ್ರುವರಿಯಲ್ಲಿ ಅದನ್ನು ನಗರಸಭೆಗೆ ಹಸ್ತಾಂತರಿಸಿದ್ದೇವೆ. ನಿರ್ವಹಣೆಯ ಜವಾಬ್ದಾರಿ ಅವರಿಗೆ ಸೇರಿದೆ
ಶ್ರೀಕಾಂತ ಚಿಮಕೋಡೆ ಆಯುಕ್ತ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರ
ಪಾಪನಾಶ ಕೆರೆಯಲ್ಲಿ ಜನರು ತ್ಯಾಜ್ಯ ಹಾಕಿ ಹೊಲಸು ಮಾಡಿರುವುದು ಗಮನಕ್ಕೆ ಬಂದಿದೆ. ನಾನೂ ಪರಿಶೀಲಿಸಿದ್ದೇನೆ. ಒಂದೆರೆಡು ದಿನಗಳಲ್ಲಿ ಸ್ವಚ್ಛಗೊಳಿಸಲಾಗುವುದು
ಶಿವರಾಜ್‌ ರಾಠೋಡ್ ಪೌರಾಯುಕ್ತ ಬೀದರ್‌ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.