ADVERTISEMENT

ಮೈಸೂರು ದಸರಾ ಮೆರವಣಿಗೆಯಲ್ಲಿ ಪಟ್ಟದ್ದೇವರ ಸ್ತಬ್ಧಚಿತ್ರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 5:02 IST
Last Updated 11 ಅಕ್ಟೋಬರ್ 2024, 5:02 IST
ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಸ್ತಬ್ಧಚಿತ್ರ
ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಸ್ತಬ್ಧಚಿತ್ರ   

ಬೀದರ್‌: ದಸರಾ ಹಬ್ಬದ ಅಂಗವಾಗಿ ಮೈಸೂರಿನಲ್ಲಿ ನಡೆಯಲಿರುವ ನಾಡದೇವತೆ ತಾಯಿ ಭುವನೇಶ್ವರಿ ದೇವಿ ಮೆರವಣಿಗೆಯಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಸ್ತಬ್ಧಚಿತ್ರ ಆಯ್ಕೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಭಾರತೀಯ ಬಸವ ಬಳಗದ ರಾಜ್ಯ ಘಟಕದ ಅಧ್ಯಕ್ಷ ಬಾಬು ವಾಲಿ ಸ್ವಾಗತಿಸಿದ್ದಾರೆ.

‘ಚನ್ನಬಸವ ಪಟ್ಟದ್ದೇವರು ಕಲ್ಯಾಣ ನಾಡಿನ ನಡೆದಾಡುವ ದೇವರು. ನೂತನ ಅನುಭವ ಮಂಟಪದ ಶಿಲ್ಪಿ. ಕನ್ನಡದ ಪಟ್ಟದೇವರೆಂದೇ ಹೆಸರಾಗಿದ್ದಾರೆ. ಅಪ್ಪಟ ಬಸವತತ್ವ ನಿಷ್ಠರು. ನಿಜಾಮನ ಆಳ್ವಿಕೆಯಲ್ಲಿ ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಟ್ಟಿ ಹಿಂದುಳಿದ ಭಾಗದ ಜನರಿಗೆ ಶಿಕ್ಷಣ ನೀಡಿದವರು. ಮಹಿಳೆಯರಿಗಾಗಿ ಅಕ್ಕಮಹಾದೇವಿ ಮಹಿಳಾ ಕಾಲೇಜು ಕಟ್ಟಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಉಚಿತ ಪ್ರಸಾದ ನಿಲಯ ಆರಂಭಿಸಿ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದವರು. ಈಗಲೂ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ನೂರಾರು ಮಕ್ಕಳು ಓದುತ್ತಿದ್ದಾರೆ. ಈ ನಾಡಿಗೆ ಪಟ್ಟದ್ದೇವರ ಕೊಡುಗೆ ಬಹಳ ದೊಡ್ಡದು. ಅಂತಹ ವ್ಯಕ್ತಿಯ ಸ್ತಬ್ಧಚಿತ್ರವನ್ನು ನಿರ್ಮಿಸಿ, ಮೈಸೂರು ದಸರಾ ಮೆರವಣಿಗೆಗೆ ಆಯ್ಕೆ ಮಾಡಿರುವುದು ಪ್ರತಿಯೊಬ್ಬರಿಗೂ ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ’ ಎಂದು ಬಾಬುವಾಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.