ADVERTISEMENT

ಸಾಗರ ಖಂಡ್ರೆಗೆ ಜನಪರ ಕಾಳಜಿ: ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 16:19 IST
Last Updated 2 ಏಪ್ರಿಲ್ 2024, 16:19 IST
ವಿಜಯಸಿಂಗ್
ವಿಜಯಸಿಂಗ್   

ಬಸವಕಲ್ಯಾಣ: ‘ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಯುವ ಉತ್ಸಾಹಿ ಆಗಿದ್ದಾರೆ. ಜನಪರ ಕಾಳಜಿಯುಳ್ಳವರು. ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕು ಎಂಬ ತೀವ್ರ ಆಸಕ್ತಿ ಅವರಲ್ಲಿ ಎದ್ದು ಕಾಣುತ್ತಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ರಾಜಕೀಯದಲ್ಲಿ ವಯಸ್ಸಿಗೆ ಮಹತ್ವವಿಲ್ಲ. ಆಸಕ್ತಿ, ಉತ್ಸಾಹ ತೋರಿದವರಿಗೆ ಆದ್ಯತೆ ನೀಡಲಾಗುತ್ತದೆ. ರಾಜಶೇಖರ ಪಾಟೀಲ ಅವರಿಗೆ ಟಿಕೆಟ್ ದೊರಕುತ್ತಿತ್ತು. ಆದರೆ ಯಾಕೋ ಏನೋ ಅವರು ಅಷ್ಟೊಂದು ಆಸಕ್ತಿ ತೋರಲಿಲ್ಲ. ಈ ಸಲ ಕ್ಷೇತ್ರದಲ್ಲಿನ ಪರಿಸ್ಥಿತಿ ಕಾಂಗ್ರೆಸ್ ಪರವಾಗಿದೆ. ಅತ್ಯಧಿಕ ಮತಗಳಿಂದ ಅಭ್ಯರ್ಥಿ ಗೆಲ್ಲಿಸಲು ಸತತವಾಗಿ ಶ್ರಮಿಸುತ್ತೇವೆ’ ಎಂದರು.

‘ಚುನಾವಣೆ ಅಂಗವಾಗಿ ಏಪ್ರಿಲ್ 4ರಂದು ಬೆಳಿಗ್ಗೆ 11ಗಂಟೆಗೆ ನಗರದ ಶಿವಪುರ ರಸ್ತೆ ನಾಗಣ್ಣ ಕಟ್ಟೆ ಹತ್ತಿರದಲ್ಲಿ ಪಕ್ಷದ ಸಂಪರ್ಕ ಕಚೇರಿ ಉದ್ಘಾಟಿಸಲಾಗುತ್ತದೆ. ನಂತರದಲ್ಲಿ ಸಸ್ತಾಪುರ ರಸ್ತೆಯಲ್ಲಿನ ಎಂ.ಎಂ.ಬೇಗ್ ಸಭಾಂಗಣದಲ್ಲಿ 12ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಅಭ್ಯರ್ಥಿ ಸಾಗರ ಖಂಡ್ರೆ, ಸಚಿವರಾದ ಈಶ್ವರ ಖಂಡ್ರೆ, ರಹೀಂಖಾನ್, ಆಳಂದ ಶಾಸಕ ಬಿ.ಆರ್. ಪಾಟೀಲ, ವಿಧಾನಪರಿಷತ್ ಸದಸ್ಯರಾದ ಅರವಿಂದ ಅರಳಿ, ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹಾಗೂ ಭಾಗದ ಮುಖಂಡರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ನಗರ ಘಟಕದ ಅಧ್ಯಕ್ಷ ಅಜರಅಲಿ ನವರಂಗ, ಪ್ರಮುಖರಾದ ಸಿಕಂದರ ಶಿಂಧೆ, ದಾವೂದ್ ಮಂಠಾಳ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.