ಕಮಲಾಪುರ: ಒಂದು ವರ್ಷ ಅತಿವೃಷ್ಟಿ, ಇನ್ನೊಂದು ವರ್ಷ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿ ಸಮಸ್ಯೆ ಎದುರಿಸುತ್ತಿದ್ದ ರೈತನಿಗೆ ಈ ಬಾರಿ ಅನಾವೃಷ್ಟಿ, ಅತಿವೃಷ್ಟಿ ಎರಡೂ ಸಂಕಷ್ಟ ತಂದೊಡ್ಡಿವೆ.
ಜೂನ್ ಹಾಗೂ ಆಗಸ್ಟ್ ಎರಡು ತಿಂಗಳು ಅನಾವೃಷ್ಟಿಯಾದರೆ ಜುಲೈ ತಿಂಗಳ ಕೊನೆಯ ವಾರ ಸುರಿದ ಅತ್ಯಧಿಕ ಮಳೆಯಿಂದ ಅಪಾರ ಬೆಳೆ ಹಾನಿಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಜೂನ್‌ನಲ್ಲಿ ಸರಾಸರಿ 98 ಮಿ.ಮೀ ಆಗಬೇಕಿದ್ದ ಮಳೆ 75 ಮಿ.ಮೀ ಆಗಿದೆ. ಈ ಸಂದರ್ಭದಲ್ಲಿ ಮಹಾಗಾಂವ ಹೋಬಳಿಯ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಬಿತ್ತನೆ ಮಾಡಲಾಯಿತು. ಮಳೆ ಕೊರತೆಯಿಂದಾಗಿ ತಾಲ್ಲೂಕಿನ ಉಳಿದ 14 ಗ್ರಾಮ ಪಂಚಾಯಿತಿಗಳಲ್ಲಿ ಆಗಸ್ಟ ಮೊದಲ ವಾರದಲ್ಲಿ ಬಿತ್ತನೆ ಆರಂಭಿಸಲಾಯಿತು.
ಜುಲೈ 20 ರಿಂದ 30 ರವರೆಗೆ ಒಂದು ವಾರ ಎಡಬಿಡದೆ ಮಳೆ ಸುರಿಯಿತು. ಈ ಸಮಯದಲ್ಲಿ ಸರಾಸರಿ 154 ಮಿ.ಮೀ ಆಗಬೇಕಿದ್ದ ಮಳೆ 320 ಮಿ.ಮೀ ಅಗಿದೆ. ಅತಿವೃಷ್ಟಿಯಿಂದಾಗಿ ಜೂನ್ ಹಾಗೂ ಜುಲೈ ಮೊದಲ ವಾರ ಬಿತ್ತನೆಯಾದ ಬೆಳೆ ಶೇ 60 ರಷ್ಟು ಹಾನಿಯಾಗಿದೆ. ಉಳಿದ ಬಿತ್ತನೆ ಸಹ ಮುಂದೂಡಲಾಯಿತು.
ಆಗಸ್ಟ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದ ಬೆಳೆಗೆ ಸಂಪೂರ್ಣ ಮಳೆ ಕೊರತೆ ಉಂಟಾಯಿತು. ಆಗಸ್ಟ್ ತಿಂಗಳು ಪೂರ್ತಿ ಸರಿಸರಿ 161 ಮಿ.ಮೀ ಆಗಬೇಕಿದ್ದ ಮಳೆ ಕೇವಲ 35 ಮಿ.ಮೀ ಆಗಿದೆ. ಶೇ 78 ರಷ್ಟು ಮಳೆ ಕೊರತೆಯುಂಟಾಯಿತು. ಪರಿಣಾಮ ಅಳಿದುಳಿದ ಬೆಳೆ ಆಗಸ್ಟ್ ತಿಂಗಳ ಅನಾವೃಷ್ಟಿಯಿಂದಾಗಿ ನಾಶವಾಯಿತು. ತೊಗರಿ ಬೆಳೆ ಬೆಳವಣಿಗೆ ಕುಂಠಿತಗೊಂಡಿದೆ.
ಬೆಳೆ ಸಮೀಕ್ಷೆ
ತಾಲ್ಲೂಕಿನಲ್ಲಿ 44,145 ಪ್ಲಾಟ್‌ಗಳಿವೆ. ಇದರಲ್ಲಿ 22,351 ಪ್ಲಾಟ್ ಸಮೀಕ್ಷೆ ಪೂರ್ಣಗೊಂಡಿದೆ. ರೈತರು ತಪ್ಪದೆ ಬೆಳೆ ಸಮೀಕ್ಷೆ ಮಾಡಿಸಬೇಕು. ನಿಮ್ಮ ಬೆಳೆ ವಿವರ ಪಹಣಿಯಲ್ಲಿ ನಮೂದಾಗುತ್ತದೆ. ಸಮೀಕ್ಷೆಗೆ ಪ್ರತಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳನ್ನು ನೇಮಿಸಲಾಗಿದೆ. ಅವರಿಗೆ ಸರ್ಕರ ಗೌರವ ಧನ ಒದಗಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.