ADVERTISEMENT

ಪಿಕೆಪಿಎಸ್‌ ಸಹಕಾರ ರಂಗದ ಹೆಬ್ಬಾಗಿಲು: ವಿಜಯಕುಮಾರ ಎಸ್

ನಾಲ್ಕು ಜಿಲ್ಲೆಗಳ ಪಿಕೆಪಿಎಸ್ ಅಧ್ಯಕ್ಷರಿಗೆ ಆಡಳಿತ ನಿರ್ವಹಣೆ ತರಬೇತಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 15:50 IST
Last Updated 30 ಜುಲೈ 2021, 15:50 IST
ಬೀದರ್‌ನ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್, ಪಾಟೀಲ ಗಾದಗಿ ಚಾಲನೆ ನೀಡಿದರು. ಚನ್ನಬಸಯ್ಯ ಸ್ವಾಮಿ, ಮಹಾಜನ ಮಲ್ಲಿಕಾರ್ಜುನ, ವಿಠ್ಠಲರೆಡ್ಡಿ ಯಡಮಲ್ಲೆ ಇದ್ದಾರೆ
ಬೀದರ್‌ನ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್, ಪಾಟೀಲ ಗಾದಗಿ ಚಾಲನೆ ನೀಡಿದರು. ಚನ್ನಬಸಯ್ಯ ಸ್ವಾಮಿ, ಮಹಾಜನ ಮಲ್ಲಿಕಾರ್ಜುನ, ವಿಠ್ಠಲರೆಡ್ಡಿ ಯಡಮಲ್ಲೆ ಇದ್ದಾರೆ   

ಬೀದರ್: ‘ಬೀದರ್ ಡಿಸಿಸಿ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವಲ್ಲಿ ದೇಶದಲ್ಲೇ ಮಾದರಿಯಾಗಿದೆ’
ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಎಸ್, ಪಾಟೀಲ ಗಾದಗಿ ಹೇಳಿದರು.

ಇಲ್ಲಿಯ ಪ್ರತಾಪನಗರದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರಿಗೆ ಆಯೋಜಿಸಿರುವ ಆಡಳಿತ ನಿರ್ವಹಣೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರ ಜೀವನಾಡಿಯಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೇ ಸಹಕಾರ ರಂಗದ ಹೆಬ್ಬಾಗಿಲಾಗಿವೆ. ರೈತರಿಗೆ ಹಣಕಾಸಿನ ಸೌಕರ್ಯ ಒದಗಿಸುವ ಸಂಘಗಳು ಲಾಭ ಗಳಿಸುವುದಕ್ಕಿಂತಲೂ ಸೇವೆಯನ್ನೇ ಪ್ರಧಾನವೆಂದು ಪರಿಗಣಿಸಿವೆ ಎಂದರು.

ADVERTISEMENT

‘ಗ್ರಾಮಗಳ ಬಡ ಕುಟುಂಬಗಳನ್ನು ಸಂಘಗಳ ಸೇವೆಯ ವ್ಯಾಪ್ತಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಅವರ ಷೇರು ಹಣ ಮತ್ತು ಸದಸ್ಯತ್ವ ಶುಲ್ಕವನ್ನು ಸರ್ಕಾರವೇ ಭರಿಸುತ್ತಿದೆ. ಇದರಿಂದ ಸಂಘಗಳಿಗೆ ಲಾಭವಾಗಲಿದ್ದು, ವ್ಯವಹಾರದ ವ್ಯಾಪ್ತಿಯೂ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.

‘ಸಹಕಾರ ಸಂಸ್ಥೆಗಳ ಮೂಲಕ ಕೃಷಿ ಸಾಲ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮಾತ್ರವಲ್ಲ ಸ್ಥಳೀಯ ಸಣ್ಣ ಉದ್ಯಮಿಗಳಿಗೆ ಸಾಲ ನೀಡುವ ಯೋಜನೆಗಳನ್ನೂ ಜಾರಿಗೊಳಿಸಲಾಗುತ್ತಿದೆ. ಆಡಳಿತ ಮಂಡಳಿ ಸದಸ್ಯರು ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಮಾತನಾಡಿ, ‘ಸಹಕಾರ ರಂಗದಲ್ಲಿ ಇಂದು ನುರಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬದಲಾವಣೆಗೆ ಅನುಗುಣವಾಗಿ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುವ ಕೆಲಸವನ್ನು ಆಡಳಿತ ಮಂಡಳಿ ಸದಸ್ಯರು ಮಾಡಬೇಕು’ ಎಂದು ಹೇಳಿದರು.

ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಜನ ಮಲ್ಲಿಕಾರ್ಜುನ ಮಾತನಾಡಿ, ‘ಕಾರ್ಯಕ್ಷಮತೆ ವೃದ್ಧಿಗಾಗಿ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಪಿಕೆಪಿಎಸ್ ಅಧ್ಯಕ್ಷರು ಹಾಗೂ ಸಿಬ್ಬಂದಿ ತರಬೇತಿಯ ಲಾಭ ಪಡೆದುಕೊಳ್ಳಬೇಕು’ ಎಂದರು.

ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ ಬ್ಯಾಂಕಿನ ಪ್ರಗತಿ ವರದಿ ವಾಚಿಸಿದರು. ಕೊಪ್ಪಳದ ಷಣ್ಮುಖಪ್ಪ, ಫಾಲಾಕ್ಷಪ್ಪ, ಆಂಜನಪ್ಪ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಹಿರಿಯ ವ್ಯವಸ್ಥಾಪಕ ಮಂಜುನಾಥ ಭಾಗವತ ಇದ್ದರು.

ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ ಪಿ. ಹಾಗೂ ಅಪ್ಪಣ್ಣ ನಿರೂಪಿಸಿದರು. ಉಪನ್ಯಾಸಕ ಎಸ್.ಜಿ.ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.