ADVERTISEMENT

ಶೌಚಾಲಯಗಳ ದುಸ್ಥಿತಿ: ಜನರ ಪರದಾಟ

ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 6:55 IST
Last Updated 11 ಜೂನ್ 2024, 6:55 IST
ಬಸವಕಲ್ಯಾಣದ ತಾಲ್ಲೂಕು ಪಂಚಾಯಿತಿ ಸಭಾಂಗಣದ ಹಿಂದಿರುವ ಶೌಚಾಲಯದ ಸುತ್ತ ಮುಳ್ಳುಕಂಟಿ ಬೆಳೆದಿರುವುದು
ಬಸವಕಲ್ಯಾಣದ ತಾಲ್ಲೂಕು ಪಂಚಾಯಿತಿ ಸಭಾಂಗಣದ ಹಿಂದಿರುವ ಶೌಚಾಲಯದ ಸುತ್ತ ಮುಳ್ಳುಕಂಟಿ ಬೆಳೆದಿರುವುದು   

ಬಸವಕಲ್ಯಾಣ: ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿನ ಎರಡೂ ಶೌಚಾಲಯಗಳು ಹಾಳಾಗಿದ್ದರಿಂದ ಜನರು ಪರದಾಡುವಂತಾಗಿದೆ. ಸ್ವಚ್ಛತೆ ಕೈಗೊಳ್ಳದ ಕಾರಣ ಪ್ರವೇಶ ದ್ವಾರದ ಅಕ್ಕಪಕ್ಕ ಯಾವಾಗಲೂ ಕಸ ಇರುತ್ತದೆ. ಸಭಾಂಗಣದ ಎದುರಿನ ಉದ್ಯಾನ ವ್ಯವಸ್ಥೆ ಇಲ್ಲದೇ ಸಂಪೂರ್ಣ ಹಾಳಾಗಿದೆ.

ಆವರಣದಲ್ಲಿನ ಸಭಾಂಗಣದ ಹಿಂಭಾಗದ ಶೌಚಾಲಯದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದೆ. ಎಲ್ಲೆಂದರಲ್ಲಿ ಕಸ ಬಿದ್ದಿದೆ. ಗೋಡೆಗಳು ಸುಣ್ಣವಿಲ್ಲದೆ ಅಂದಗೆಟ್ಟಿದ್ದು, ಸುತ್ತ ಮುಳ್ಳುಕಂಟಿಗಳು ಬೆಳೆದಿವೆ. ವಿವಿಧ ಗ್ರಾಮಗಳಿಂದ ಇಲ್ಲಿಗೆ ಬರುವ ಜನರು ಬೇರೆ ಮಾರ್ಗವಿಲ್ಲದೇ ಮುಳ್ಳಿಕಂಟಿಯೊಳಗೆ ಇರುವ ಶೌಚಾಲಯಕ್ಕೆ ಹೋಗುತ್ತಾರೆ. ಆದ್ದರಿಂದ ಯಾವಾಗಲೂ ಇಲ್ಲಿ ದುರ್ನಾತ ಸೂಸುತ್ತಿದೆ.

ಕಚೇರಿಯ ಸಮೀಪ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹತ್ತಿಕೊಂಡು ಇನ್ನೊಂದು ಶೌಚಾಲಯವಿದೆ. ಇಲ್ಲಿಯೂ ಯಾವುದೇ ಸೌಲಭ್ಯವಿಲ್ಲ. ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಬಾಗಿಲುಗಳು ತೆರೆದಿರುವ ಕಾರಣ ಹಂದಿ, ನಾಯಿ ಒಳಗೆ ನುಗ್ಗುತ್ತವೆ. ಹೀಗಾಗಿ ಇಲ್ಲಿ ಯಾರೂ ಹೋಗದಂತಾಗಿದೆ.

ADVERTISEMENT

ಮುಖ್ಯವೆಂದರೆ, ನಾಲ್ಕೈದು ಎಕರೆಯಷ್ಟು ವಿಶಾಲವಾದ ಆವರಣವಿರುವ ಈ ಸ್ಥಳದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಕ್ಷರ ದಾಸೋಹ ಯೋಜನಾಧಿಕಾರಿ ಕಚೇರಿ, ಅಂಗವಿಕಲರ ಕಲ್ಯಾಣ ಇಲಾಖೆ ಕಚೇರಿ ಮತ್ತು ವಿವಿಧ ಯೋಜನೆಗಳ ತರಬೇತಿ ಕೇಂದ್ರವಿದೆ. ತಾಲ್ಲೂಕು ಪಂಚಾಯಿತಿಯ ಹೊಸ ಕಟ್ಟಡ ಸಹ ಇದೇ ಆವರಣದಲ್ಲಿದೆ.

ಇಷ್ಟಿದ್ದರೂ ಶೌಚಾಲಯ ಮತ್ತು ಮೂತ್ರಾಲಯಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲ. ತಾಲ್ಲೂಕು ಪಂಚಾಯಿತಿ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು ಸಹ ಈ ಕಡೆ ನಿರ್ಲಕ್ಷ್ಯ ತಾಳಿದ್ದಾರೆ.

‘ವಿವಿಧ ಇಲಾಖೆಗಳ ಅಧಿಕಾರಿಗಳ ಕಚೇರಿಗಳಲ್ಲಿ ಗ್ಲಾಸ್ ಅಳವಡಿಸಿ ಎಸಿ ಕೂಡಿಸಲಾಗಿದೆ. ಅವರಿಗಾಗಿ ಪ್ರತ್ಯೇಕ ಶೌಚಾಲಯಗಳಿವೆ. ಹೀಗಾಗಿ ಅವರಿಗೆ ಹೊರಗಿನ ಶೌಚಾಲಯಗಳ ಅವ್ಯವಸ್ಥೆ ಕಾಣುತ್ತಿಲ್ಲ' ಎಂದು ಪ್ರಮುಖರಾದ ಗುರಣ್ಣ ಪ್ರತಾಪುರೆ ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕು ಪಂಚಾಯಿತಿಯಿಂದ ನಿರ್ಮಿಸಿದ 60ಕ್ಕೂ ಅಧಿಕ ಮಳಿಗೆಗಳು ಕೂಡ ಇವೆ. ಇಲ್ಲಿಯ ವ್ಯಾಪಾರಸ್ಥರಿಗೆ ಮತ್ತು ಗ್ರಾಮಗಳಿಂದ ಕಚೇರಿಗೆ ಬರುವ ಜನರಿಗೆ ಶೌಚಾಲಯವಿಲ್ಲದೆ ತೊಂದರೆ ಆಗುತ್ತಿದೆ ಎಂದು ಅನೇಕ ಸಲ ಸಂಬಂಧಿತರಿಗೆ ತಿಳಿಸಿದರೂ ಯಾರೂ ಲಕ್ಷ್ಯ ವಹಿಸುತ್ತಿಲ್ಲ. ಇನ್ನು ಮುಂದಾದರೂ ಶೀಘ್ರ ಕ್ರಮ ತೆಗೆದುಕೊಳ್ಳಬೇಕು' ಎಂದು ವ್ಯಾಪಾರಸ್ಥ ನೈಮೊದ್ದಿನ್ ಆಗ್ರಹಿಸಿದ್ದಾರೆ.

`ನಾನು ಬಂದ ನಂತರ ಚುನಾವಣೆ ಎದುರಾಯಿತು. ಇದಲ್ಲದೆ ಇತರೆ ಆನಿವಾರ್ಯ ಕಾರಣಗಳಿಂದ ಆವರಣದಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಲಾಗಿಲ್ಲ. ಕೆಲ ದಿನಗಳಲ್ಲಿ ವ್ಯವಸ್ಥೆ ಸುಧಾರಿಸಲಾಗುವುದು' ಎಂದು ತಾಲ್ಲೂಕು ಪಂಚಾಯಿತಿ ಇಒ ರಮೇಶ ಸುಲ್ಫಿ ಪ್ರತಿಕ್ರಿಯಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಶೌಚಾಲಯಗಳ ಪರಿಸ್ಥಿತಿ ಸುಧಾರಣೆಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು. ಇತರೆ ಸೌಲಭ್ಯ ಒದಗಿಸಲಾಗುವುದು.
-ರಮೇಶ ಸುಲ್ಫಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.