ADVERTISEMENT

ಬೀದರ್‌: ಮೂವರು ಅಂತರರಾಜ್ಯ ಕಳ್ಳರ ಬಂಧನ, ₹21 ಲಕ್ಷ ವಿದೇಶಿ ಕರೆನ್ಸಿ ಜಪ್ತಿ

ಬಸವಕಲ್ಯಾಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಸೋಗಿನಲ್ಲಿ ದರೋಡೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 12:48 IST
Last Updated 2 ಏಪ್ರಿಲ್ 2024, 12:48 IST
<div class="paragraphs"><p>ಆರೋಪಿಗಳ ಬಳಿ ಜಪ್ತಿ ಮಾಡಿರುವ ವಿದೇಶಿ ಕರೆನ್ಸಿ </p></div>

ಆರೋಪಿಗಳ ಬಳಿ ಜಪ್ತಿ ಮಾಡಿರುವ ವಿದೇಶಿ ಕರೆನ್ಸಿ

   

ಬೀದರ್‌: ಬಸವಕಲ್ಯಾಣ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಸಮವಸ್ತ್ರ ಧರಿಸಿಕೊಂಡು ಅವರ ಸೋಗಿನಲ್ಲಿ ಹಣ ದೋಚಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು, ಅವರಿಂದ ₹21 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ಜಪ್ತಿ ಮಾಡಿದ್ದಾರೆ.

ಉಬರ್‌ ವಾಹನ ಚಾಲಕ ನವೀನ್‌, ಬಾಲಕೃಷ್ಣ ಹಾಗೂ ಸಿದ್ದಿರಾಮ ನ್ಯಾಯಾಂಗ ಬಂಧನಕ್ಕೆ ಒಳಗಾದವರು. ವೆಂಕಟ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ. ನಾಲ್ಕೂ ಜನರು ಹೈದರಾಬಾದಿನವರು. ಬಂಧಿತ ಬಾಲಕೃಷ್ಣ ಎಂಬಾತನ ಪತ್ನಿ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪೊಲೀಸ್‌ ಡ್ರೆಸ್‌ ಕೋಡ್‌ ಸೇರಿದಂತೆ ಎಲ್ಲದರ ಬಗ್ಗೆ ಹೆಂಡತಿಯಿಂದ ತಿಳಿದುಕೊಂಡು, ಅದೇ ತರಹದ ಸಮವಸ್ತ್ರ ಧರಿಸಿ ಕೃತ್ಯ ಎಸಗಿದ್ದಾರೆ. ಅಮೆರಿಕ, ಯುಎಇ ಹಾಗೂ ಸೌದಿ ಅರೇಬಿಯಾ ದೇಶಗಳ ಕರೆನ್ಸಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ತೆಲಂಗಾಣದ ಕಮ್ಮಾರೆಡ್ಡಿ ಜಿಲ್ಲೆಯ ಸದಾಶಿವನಗರದ ರಾಮರೆಡ್ಡಿ ಎಂಬ ಚಿನ್ನದ ವ್ಯಾಪಾರಿ ಮಾರ್ಚ್‌ 28ರಂದು ಚಿನ್ನ ಖರೀದಿಗೆ ಖಾಸಗಿ ಬಸ್‌ನಲ್ಲಿ ಹೈದರಾಬಾದ್‌ನಿಂದ ಮುಂಬೈಗೆ ಹೊರಟಿದ್ದರು. ಬಸವಕಲ್ಯಾಣ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಸೋಗಿನಲ್ಲಿ ಬಂದ ಈ ದರೋಡೆಕೋರರು ಚುನಾವಣೆ ನೀತಿ ಸಂಹಿತೆಯ ನೆಪದಲ್ಲಿ ಪರಿಶೀಲನೆಗೆ ಬಸ್ಸಿನೊಳಗೆ ನೇರ ರಾಮರೆಡ್ಡಿ ಬಳಿ ಬಂದು ಕರೆನ್ಸಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೇಸ್‌ ಮಾಡಿದರೆ ಜೈಲು ಶಿಕ್ಷೆಯಾಗುತ್ತದೆ ಎಂದು ಹೆದರಿಸಿ ಪರಾರಿಯಾಗಿದ್ದಾರೆ. ಆರಂಭದಲ್ಲಿ ರಾಮರೆಡ್ಡಿ ₹80 ಸಾವಿರ ನಗದು ದೋಚಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಆನಂತರ ₹21 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ವಿದೇಶಿ ಕರೆನ್ಸಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು. ಈ ಸಂಬಂಧ ಬಸವಕಲ್ಯಾಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕೃಷ್ಣ, ನವೀನ್‌, ಸಿದ್ದಿರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.