ಬೀದರ್: ಪೊಲೀಸ್ ಇಲಾಖೆಯ ಅತ್ಯಂತ ದಕ್ಷ ಶ್ವಾನವೆಂದೆ ಗುರುತಿಸಿಕೊಂಡಿದ್ದ ‘ಬ್ರುನೋ’ ಭಾನುವಾರ ನಿಧನ ಹೊಂದಿದೆ.
ಭಾನುವಾರ ಮಧ್ಯಾಹ್ನ ನಗರದ ಪೊಲೀಸ್ ಹೆಡ್‌ಕ್ವಾರ್ಟರ್‌ನಲ್ಲಿ ಪೊಲೀಸ್ ಗೌರವದೊಂದಿಗೆ ಬ್ರುನೋ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಡಿವೈಎಸ್‌ಪಿ ಶಿವನಗೌಡ ಪಾಟೀಲ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬ್ರುನೋಗೆ ಅಂತಿಮ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಸ್ಫೋಟಕ ಪತ್ತೆ ಹಚ್ಚುವ ಕೆಲಸವನ್ನು ‘ಬ್ರುನೋ’ ಬಹಳ ದಕ್ಷ ರೀತಿಯಲ್ಲಿ ಮಾಡಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಜಿಲ್ಲೆಗೆ ಭೇಟಿ ಕೊಟ್ಟಾಗ ಭದ್ರತಾ ಕಾರ್ಯದಲ್ಲಿ ಜೊತೆಯಾಗಿರುತ್ತಿತ್ತು. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆದ್ದಿರುವ ಹಿರಿಮೆ ಬ್ರುನೋಗಿದೆ. 10 ವರ್ಷ 6 ತಿಂಗಳು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಬ್ರುನೋ ಅಕಾಲಿಕ ನಿಧನ ಹೊಂದಿರುವುದು ದುಃಖದ ವಿಷಯ. ಅದರ ಆತ್ಮಕ್ಕೆ ಭಗವಂತ ಶಾಂತಿ ಕೊಡಲಿ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಮಾತನಾಡಿ, ಶ್ವಾನ ಅಂದರೆ ಪ್ರಾಮಾಣಿಕತೆಗೆ ಹೆಸರು. ಅದರಲ್ಲೂ ಬ್ರುನೋ ತನ್ನ ಜೀವಿತಾವಧಿವರೆಗೆ ಪೊಲೀಸ್ ಇಲಾಖೆಯ ಬೆನ್ನೆಲುಬಾಗಿ ಕೆಲಸ ಮಾಡಿದೆ. ಅನೇಕ ಅಪರಾಧಗಳನ್ನು ಪತ್ತೆ ಹಚ್ಚಲು ನೆರವು ನೀಡಿದೆ. ಭದ್ರತೆಯಲ್ಲಿ ಮಹತ್ವದ ಕೆಲಸ ಮಾಡಿದೆ ಎಂದು ನೆನಪಿಸಿಕೊಂಡರು.
ಶ್ವಾನ ದಳದ ಅಧಿಕಾರಿ ಅಶೋಕ ಮಾತನಾಡಿ, ಬ್ರುನೋ ಬೀದರ್ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಮೈಸೂರು, ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ಗಣ್ಯರು ಭೇಟಿ ಕೊಟ್ಟಾಗ ಭದ್ರತೆಯ ಕೆಲಸ ನಿರ್ವಹಿಸಿದೆ. ಸ್ಫೋಟಕ ಪತ್ತೆ ಹಚ್ಚುವ ಕೆಲಸ ಮಾಡಿದೆ. ಅದು ನಮ್ಮನ್ನಗಲಿರುವುದು ಬಹಳ ದುಃಖದ ವಿಷಯ. ಶ್ವಾನ ದಳಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.