ADVERTISEMENT

ಬೀದರ್: ಅವ್ಯವಸ್ಥೆ ಗೂಡಾದ ಸರ್ಕಾರಿ ಈಜುಕೊಳ

ಸ್ವಚ್ಛತೆ ಮರೀಚಿಕೆ; ನಿರ್ವಹಣೆ ನಾಮಕವಸ್ತೆ; ತರಬೇತಿಯ ಕೊರತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಜೂನ್ 2024, 4:58 IST
Last Updated 24 ಜೂನ್ 2024, 4:58 IST
ಬೀದರ್‌ನ ಬಾಲ ಭವನದಲ್ಲಿರುವ ಈಜುಕೊಳ
ಬೀದರ್‌ನ ಬಾಲ ಭವನದಲ್ಲಿರುವ ಈಜುಕೊಳ   

ಬೀದರ್: ನಗರದ ಬಾಲಭವನದ ಆವರಣದಲ್ಲಿರುವ ಸರ್ಕಾರಿ ಈಜುಕೊಳ ಅವ್ಯವಸ್ಥೆಯ ಗೂಡಾಗಿದೆ.

ಸ್ವಚ್ಛತೆ ಸಂಪೂರ್ಣ ಮರೀಚಿಕೆ ಆಗಿದೆ. ನಿರ್ವಹಣೆ ನಾಮಕವಸ್ತೆ ಎಂಬಂತಾಗಿದೆ. ಒಂದು ಈಜುಕೊಳವನ್ನು ಯಾವ ರೀತಿ ವೈಜ್ಞಾನಿಕ ರೀತಿಯಲ್ಲಿ ನಡೆಸಬೇಕೋ ಆ ರೀತಿಯ ಕೆಲಸಗಳಾಗುತ್ತಿಲ್ಲ ಎನ್ನುವುದು ಈಜುಪಟುಗಳ ಗಂಭೀರ ಆರೋಪವಾಗಿದೆ.

ಈ ಬಗ್ಗೆ ಸ್ವತಃ ‘ಪ್ರಜಾವಾಣಿ’ ಹಲವು ಸಲ ಈಜುಕೊಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಗಮನಕ್ಕೆ ಬಂದಿದೆ. ಈಜುಪಟುಗಳ ಆರೋಪವನ್ನು ಪುಷ್ಟೀಕರಿಸುವಂತಿದೆ. ಈಜುಕೊಳದಲ್ಲಿ ಪಾಚಿ ಬೆಳೆಯದಂತೆ ಯಂತ್ರಗಳ ಸಹಾಯದಿಂದ ನಿತ್ಯ ಸ್ವಚ್ಛಗೊಳಿಸಬೇಕು. ಆದರೆ, ಆ ಕೆಲಸ ನಡೆಯುತ್ತಿಲ್ಲ. ಇದರಿಂದ ಕೆಳಭಾಗದಲ್ಲಿ ಪಾಚಿ, ಅಲ್ಗೆ ಬೆಳೆಯುತ್ತಿದೆ. ರೇಖೆಗಳು ಸರಿಯಾಗಿ ಗೋಚರಿಸುವುದಿಲ್ಲ. ಈಜುಪಟುಗಳಿಗೆ ಒಂದೇ ಸಮನಾದ ದಿಕ್ಕಿನಲ್ಲಿ ಈಜಾಡಲು ತೊಂದರೆಯಾಗುತ್ತಿದೆ. ದಿಕ್ಕು ತಪ್ಪಿ ಕೆಲವರು ಗಾಯಗೊಂಡಿದ್ದಾರೆ. ಆಗಾಗ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗುತ್ತದೆ. ಸಮರ್ಪಕವಾಗಿ ಸ್ವಚ್ಛತೆ ಕೈಗೊಳ್ಳುತ್ತಿಲ್ಲ. ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸುತ್ತಿಲ್ಲ ಎನ್ನುವುದಕ್ಕೆ ಇದು ದೊಡ್ಡ ಸಾಕ್ಷಿ. ಇದರಿಂದ ಗಂಭೀರ ಸ್ವರೂಪದ ರೋಗಗಳು ಬರಬಹುದು. ಅದರಲ್ಲೂ ಚಿಣ್ಣರಿಗೆ ಚರ್ಮರೋಗ, ಗಂಟಲು, ಮೂಗು, ಕಿವಿಗೆ ಸಂಬಂಧಿಸಿದ ರೋಗಗಳು ಬೇಗ ಬರುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು. 

ADVERTISEMENT

ಹೆಸರಿಗಷ್ಟೇ ತರಬೇತುದಾರರು:

ಈಜುಕೊಳದಲ್ಲಿ ಪ್ರವೇಶ ಪಡೆಯುವಾಗ ಸೂಕ್ತ ತರಬೇತಿ ಕೂಡ ಕೊಡಲಾಗುತ್ತದೆ ಎಂದು ತಿಳಿಸಲಾಗುತ್ತದೆ. ಆದರೆ, ಇಲ್ಲಿ ತರಬೇತಿ ನೀಡಲಾಗುತ್ತಿಲ್ಲ. ಇಷ್ಟೇ ಇಲ್ಲ, ಈಜುಕೊಳದಲ್ಲಿ ಈಜಾಡುವವರ ಮೇಲೆ ಯಾರೂ ಕೂಡ ಸರಿಯಾಗಿ ನಿಗಾ ಕೂಡ ಇಡುವುದಿಲ್ಲ. ಇದು ನಿರ್ಲಕ್ಷ್ಯಕ್ಕೆ ದೊಡ್ಡ ಸಾಕ್ಷಿ.

ಅನೇಕರು ಹೊಸದಾಗಿ ಈಜು ಕಲಿಯಲು ಬಂದಿರುತ್ತಾರೆ. ಅವರಿಗೆ ಕನಿಷ್ಠ ಈಜಾಡುವ ಕನಿಷ್ಠ ವಿಧಾನಗಳನ್ನು ಹೇಳಿಕೊಡುವವರು ಇಲ್ಲಿಲ್ಲ. ಈಜುಕೊಳದ ಬಹುತೇಕ ಸಿಬ್ಬಂದಿ ಮೊಬೈಲ್‌ ನೋಡುವುದರಲ್ಲಿ ಮಗ್ನರಾಗಿರುತ್ತಾರೆ. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಿಲ್ಲ. ಚಿಣ್ಣರು ಈಜಾಡುತ್ತ ನೀರಲ್ಲಿ ಮುಳುಗುವ ಸಾಧ್ಯತೆ ಇರುತ್ತದೆ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅನೇಕ ಸಲ ದುರ್ಘಟನೆಗಳು ತಪ್ಪಿದ ನಿದರ್ಶನಗಳಿವೆ. ಆದರೆ, ಬೇರೆಯವರ ಜೀವದೊಂದಿಗೆ ಚೆಲ್ಲಾಟ ಆಡುತ್ತಿರುವುದು ಗಂಭೀರವಾದ ಪ್ರಮಾದ.

‘ಇತ್ತೀಚೆಗೆ ಸುಮಾರು ಮೂರು ವರ್ಷದ ಬಾಲಕಿ ಟ್ಯೂಬ್‌ ಸಹಾಯದಿಂದ ಈಜು ಕಲಿಯುತ್ತಿದ್ದಳು. ಅವರ ತಂದೆ ಮೊಬೈಲ್‌ ನೋಡುತ್ತ ದೂರದಲ್ಲಿ ಕುಳಿತಿದ್ದರು. ಅಲ್ಲಿನ ಸಿಬ್ಬಂದಿ ಕೂಡ ಆ ಸಂದರ್ಭದಲ್ಲಿ ಅಲ್ಲಿರಲಿಲ್ಲ. ಬಾಲಕಿ ಟ್ಯೂಬ್‌ನಿಂದ ಆಚೆ ಬಂದು ನೀರಲ್ಲಿ ಮುಳುಗುತ್ತಿದ್ದಳು. ಇನ್ನೊಂದು ತುದಿಯಲ್ಲಿ ಈಜಾಡುತ್ತಿದ್ದ ನಾನು ಗಮನಿಸಿ ತಕ್ಷಣವೇ ಬಾಲಕಿಯ ನೆರವಿಗೆ ಧಾವಿಸಿ ರಕ್ಷಿಸಿದೆ. ನಂತರ ಬಾಲಕಿಯ ತಂದೆ ಹಾಗೂ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದೆ. ಹೀಗಿದ್ದರೂ ಈ ರೀತಿಯ ಘಟನೆಗಳು ಮೇಲಿಂದ ಮೇಲೆ ಆಗುತ್ತಿವೆ’ ಎಂದು ಹೆಸರು ಹೇಳಲಿಚ್ಛಿಸದ ಈಜುಪಟುವೊಬ್ಬರು ’ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

’ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಹರ್ಷ ಗುಪ್ತ ಅವರು ಬಹಳ ದೂರದೃಷ್ಟಿ ಇಟ್ಟುಕೊಂಡು ಈಜುಕೊಳ ನಿರ್ಮಿಸಿದ್ದರು. ಸ್ಥಳೀಯ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ, ಜಿಲ್ಲೆಗೆ ಕೀರ್ತಿ ತರಲೆಂಬುದು ಅವರ ಉದ್ದೇಶವಾಗಿತ್ತು. ಆದರೆ, ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದರೂ ಆ ಆಶಯ ಈಡೇರಿಲ್ಲ‘ ಎಂದು ಹಿರಿಯ ಈಜುಪಟುವೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

’ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತವಾದ ಈಜುಕೊಳ ನಿರ್ಮಿಸಲಾಗಿದೆ. ಅದನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದಿದ್ದರೆ ಹೇಗೆ? ಬೀದರ್‌ ಸೇರಿದಂತೆ ರಾಜ್ಯದ ನಾಲ್ಕೈದು ಕಡೆಗಳಲ್ಲಷ್ಟೇ ಈ ರೀತಿಯ ಸುಸಜ್ಜಿತವಾದ ಈಜುಕೊಳ ನಿರ್ಮಿಸಲಾಗಿದೆ. ಆದರೆ, ಅವುಗಳಲ್ಲಿ ಅತಿ ಕಳಪೆ ನಿರ್ವಹಣೆ ಬೀದರ್‌ನಲ್ಲಿ ಮಾಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ‘ ಎಂದು ಗೋಳು ತೋಡಿಕೊಂಡಿದ್ದಾರೆ.

‘ರಾಜ್ಯ ರಾಷ್ಟ್ರೀಯ ಸ್ಪರ್ಧೆಗಿಲ್ಲ’

ಈಜುಕೊಳದಲ್ಲಿ ವೃತ್ತಿಪರ ಈಜು ತರಬೇತುದಾರರು ಇಲ್ಲ. ಇದರಿಂದಾಗಿ ಇದುವರೆಗೆ ಸ್ಥಳೀಯ ಮಟ್ಟದಿಂದ ರಾಜ್ಯ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಯಾರೂ ಅರ್ಹತೆ ಪಡೆದು ಪದಕ ಜಯಿಸಿಲ್ಲ. ‘ಅನೇಕರು ಉತ್ತಮ ಈಜುಪಟುಗಳು ಆಗಬೇಕೆಂಬ ಆಸೆಯಿದೆ. ಆದರೆ ಅವರ ಆಸೆಗೆ ಸೂಕ್ತ ಪ್ರೋತ್ಸಾಹ ತರಬೇತಿ ಸಿಗುತ್ತಿಲ್ಲ. ಕೆಲ ಹಣವಂತರು ಹೈದರಾಬಾದ್‌ ಬೆಂಗಳೂರಿಗೆ ಹೋಗಿ ತರಬೇತಿ ಪಡೆದುಕೊಳ್ಳುತ್ತಾರೆ. ಪ್ರತಿಭೆಯಿದ್ದರೂ ಹಣವಿಲ್ಲದ ಕಾರಣಕ್ಕೆ ಕೆಲವರು ದೂರ ಸರಿದುಕೊಳ್ಳುತ್ತಿದ್ದಾರೆ‘ ಎಂದು ಈಜುಪಟು ರಮೇಶ ಎಂಬುವರು ತಿಳಿಸಿದರು.

ಕಾಲಕಾಲಕ್ಕೆ ನಡೆಯದ ಪರೀಕ್ಷೆ

ಸರ್ಕಾರಿ ಹಾಗೂ ಖಾಸಗಿ ಈಜುಕೊಳಗಳಿಗೆ ಕಾಲಕಾಲಕ್ಕೆ ಆರೋಗ್ಯ ಇಲಾಖೆಯವರು ಭೇಟಿ ಕೊಟ್ಟು ಸರ್ಕಾರದ ಮಾನದಂಡಗಳ ಪ್ರಕಾರ ನಡೆಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು. ಆದರೆ ಆ ಕೆಲಸ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಒಂದು ವೇಳೆ ಆರೋಗ್ಯ ಇಲಾಖೆಯವರು ಗಂಭೀರವಾಗಿ ತೆಗೆದುಕೊಂಡಿದ್ದರೆ ಯಾರೂ ನಿಯಮ ಉಲ್ಲಂಘಿಸುತ್ತಿರಲಿಲ್ಲ ಎಂದು ಈಜುಪಟುಗಳು ಹೇಳಿದ್ದಾರೆ. ‘ನಗರದ ಕೆಲ ಖಾಸಗಿ ಈಜುಕೊಳಗಳಲ್ಲಿ ಬೇಕಾಬಿಟ್ಟಿ ನೀರು ಕ್ಲೋರಿನೇಶನ್‌ ಮಾಡಲಾಗುತ್ತಿದೆ. ನೀರು ಶುದ್ಧವಾಗಿ ಕಾಣಬೇಕೆಂಬ ಉದ್ದೇಶದಿಂದ ಮನಸ್ಸಿಗೆ ತೋಚಿದಂತೆ ಮಾಡುತ್ತಾರೆ. ಹೀಗೆ ಮಾಡಿದರೆ ಜನರಿಗೆ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಆದಕಾರಣ ಆರೋಗ್ಯ ಇಲಾಖೆಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಮುನ್ಸೂಚನೆ ಇಲ್ಲದೆ ಹಠಾತ್‌ ಈಜುಕೊಳಗಳಿಗೆ ಭೇಟಿ ಕೊಟ್ಟು ಪರಿಶೀಲಿಸಬೇಕು’ ಎಂದು ಈಜುಪಟು ರಾಕೇಶ್‌ ಅಭಿಪ್ರಾಯಪಟ್ಟಿದ್ದಾರೆ. ‘ಈಜುಕೊಳಗಳ ನಿರ್ವಹಣೆ ನೀರಿನ ಪರೀಕ್ಷೆ ನಡೆಸಿ ಸರಿಪಡಿಸುವ ಕೆಲಸ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಡುತ್ತದೆ. ಅದರಲ್ಲಿ ಆರೋಗ್ಯ ಇಲಾಖೆಯ ಪಾತ್ರವೇನೂ ಇಲ್ಲ‘ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಚರ್ಮ ತಜ್ಞರು ಏನೆನ್ನುತ್ತಾರೆ?   

ಈಜುಕೊಳದಲ್ಲಿ ಕ್ಲೋರಿನೇಶನ್‌ ಮಾಡುವುದು ತಪ್ಪಲ್ಲ. ಆದರೆ ಕ್ಲೋರಿನೇಶನ್‌ ವೈಜ್ಞಾನಿಕವಾಗಿ ಮಾಡಬೇಕು. ಮೇಲಿಂದ ಮೇಲೆ ಕ್ಲೋರಿನೇಶನ್‌ ಪ್ರಮಾಣ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡುತ್ತಿರಬೇಕು. ಇಲ್ಲವಾದರೆ ಈಜಾಡುವವರಿಗೆ ಚರ್ಮ ಕಾಯಿಲೆ ಅಲರ್ಜಿ ತುರಿಕೆ ಸೇರಿದಂತೆ ಹಲವು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಉಂಟಾಗಬಹುದು. ಸರ್ಕಾರಿ ಇರಲಿ ಖಾಸಗಿಯವರು ಇರಲಿ ಈಜುಕೊಳವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಡಾ.ಅಶೋಕ್‌ ನಾಗೂರೆ ಚರ್ಮರೋಗ ತಜ್ಞ

ದಟ್ಟಣೆ ಮಳೆ ಬಂದಾಗ ಸ್ವಲ್ಪ ಸಮಸ್ಯೆ

ಮಾರ್ಚ್‌ನಿಂದ ಮೇ ತಿಂಗಳವರೆಗೆ ಈಜುಕೊಳದಲ್ಲಿ ದಟ್ಟಣೆ ಹೆಚ್ಚಿರುತ್ತದೆ. ಆಗ ಸ್ವಲ್ಪ ಸಮಸ್ಯೆ ಉದ್ಭವಿಸುತ್ತದೆ. ಮಳೆ ಬಿದ್ದಾಗ ಕೆಲವೊಮ್ಮೆ ನೀರಿನಲ್ಲಿ ಸೇರಿಕೊಂಡು ನೀರು ಅಶುದ್ಧವಾಗುತ್ತದೆ. ಮಿಕ್ಕುಳಿದ ಅವಧಿಯಲ್ಲಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಆಗುತ್ತದೆ. ಕೆಲವರು ಹೊರಗುತ್ತಿಗೆ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಗಮನಕ್ಕೆ ಬಂದಿದೆ. ಕೆಲವರನ್ನು ಕೈಬಿಟ್ಟು ವೃತ್ತಿಪರರನ್ನು ತೆಗೆದುಕೊಂಡು ಇನ್ನಷ್ಟು ಸುಧಾರಣೆ ತರಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗೌತಮ್‌ ಅರಳಿ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.