ADVERTISEMENT

ಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೆ ಹೋರಾಟ: ಶಾಸಕ ಪ್ರಭು ಚವಾಣ್‌

ಸಿದ್ದರಾಮಯ್ಯ ಧೃತರಾಷ್ಟ್ರ, ಡಿಕೆಶಿಯದ್ದು ಕೌರವರ ಪಡೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 13:28 IST
Last Updated 21 ಆಗಸ್ಟ್ 2024, 13:28 IST
   

ಬೀದರ್‌: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಾಭಾರತದ ಧೃತರಾಷ್ಟ್ರನಿದ್ದಂತೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರದು ಕೌರವರ ಪಡೆ. ಕೌರವರು ತನ್ನ ಹಿಂದೆ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಧೃತರಾಷ್ಟ್ರ ಗಮನಹರಿಸಬೇಕು ಹೊರತು ಬಿಜೆಪಿಯನ್ನು ಟೀಕಿಸುವ ಕೆಲಸ ಮಾಡಬಾರದು’ ಎಂದು ಮಾಜಿಸಚಿವರೂ ಆದ ಔರಾದ್‌ ಶಾಸಕ ಪ್ರಭು ಚವಾಣ್‌ ಹೇಳಿದರು.

ನಗರದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕಚೇರಿಯಿಂದ ಎಲ್ಲ ವಿಷಯಗಳು ಸೋರಿಕೆ ಆಗುತ್ತಿವೆ. ಸಿ.ಎಂ.ಗೆ ಕಂಟ್ರೋಲ್‌ ಇಲ್ಲ. ಅವರ ಮನೆ ದುರ್ಬಲವಾಗಿದೆ. ಅವರು ತಮ್ಮ ಮನೆ ಬಿಟ್ಟು ಬಿಜೆಪಿ ಮನೆಯ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಕೌರವರು ಅವರ ವಿರುದ್ಧ ಏನು ಮಾಡುತ್ತಿದ್ದಾರೆ ಎನ್ನುವುದರ ಕಡೆಗೆ ಮೊದಲು ಗಮನಹರಿಸಲಿ ಎಂದರು.

ವಾಲ್ಮೀಕಿ ನಿಗಮದ ಹಗರಣ ಸಾಬೀತಾಗಿದೆ. ಮಾಜಿಸಚಿವ ನಾಗೇಂದ್ರ ಜೈಲು ಸೇರಿದ್ದಾರೆ. ಸ್ವತಃ ಮುಖ್ಯಮಂತ್ರಿಯವರು ವಿಧಾನಸೌಧದಲ್ಲಿ ಅದನ್ನು ಒಪ್ಪಿಕೊಂಡಿದ್ದಾರೆ. ಇನ್ನು, ಮುಡಾದಲ್ಲಿ ₹5 ಸಾವಿರ ಕೋಟಿ ಹಗರಣ ನಡೆದಿದೆ. ಧೃತರಾಷ್ಟ್ರನಿಗೆ ಕೌರವರ ಪಡೆ ಮೋಸ ಮಾಡುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಯವರು ಏನೂ ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.

ADVERTISEMENT

ಒಂದು ವರ್ಷದಲ್ಲಿ ರಾಜ್ಯದಲ್ಲಿ ಹಗರಣಗಳ ಮೇಲೆ ಹಗರಣಗಳು ನಡೆಯುತ್ತಿವೆ. ಗ್ಯಾರಂಟಿಗಳ ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಗ್ಯಾರಂಟಿ ಫಲಾನುಭವಿಗಳಿಗೆ ಕಳೆದ ಮೂರು ತಿಂಗಳಿಂದ ಅವುಗಳ ಲಾಭ ಸಿಕ್ಕಿಲ್ಲ. ಕಾಂಗ್ರೆಸ್‌ನವರು ಕರ್ನಾಟಕವನ್ನು ಶ್ರೀಲಂಕಾ, ಬಾಂಗ್ಲಾದೇಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕಾನೂನು ತಜ್ಞರ ಜೊತೆ ಚರ್ಚಿಸಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಮುಖ್ಯಮಂತ್ರಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಅವರು ರಾಜೀನಾಮೆ ಕೊಡುವವರೆಗೆ ಬಿಜೆಪಿ ರಾಜ್ಯದಾದ್ಯಂತ ಹೋರಾಟ ಮುಂದುವರೆಸಲಿದೆ ಎಂದು ಹೇಳಿದರು.

ಮುಡಾ ಹಗರಣ ಕುರಿತು ಸ್ವತಃ ಮುಡಾ ಅಧ್ಯಕ್ಷರೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ₹5 ಸಾವಿರ ಕೋಟಿ ಹಗರಣ ನಡೆದಿದೆ. ಇಷ್ಟೆಲ್ಲ ಆಗಿದ್ದರೂ ವಿರೋಧ ಪಕ್ಷವಾಗಿರುವ ನಾವು ಸುಮ್ಮನೆ ಕೂರಬೇಕಾ? ಮಲಗಬೇಕಾ? ಖಂಡಿತ ಇಲ್ಲ ಎಂದು ಹೇಳಿದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ಪ್ರಕರಣಗಳು ಬೇರೆ ಬೇರೆ. ರಾಜ್ಯಪಾಲರು ಕಾನೂನು ಸಲಹೆ ಪಡೆದುಕೊಂಡೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ವಿರುದ್ಧದ ದೂರು ಕೂಡ ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಜೈಕುಮಾರ ಕಾಂಗೆ ಮಾತನಾಡಿ, ದಲಿತ ಸಮುದಾಯಕ್ಕೆ ಸೇರಿರುವ ರಾಜ್ಯಪಾಲರನ್ನು ನಿಂದಿಸಿರುವ ಕಾಂಗ್ರೆಸ್‌ ಸರ್ಕಾರದ ಸಚಿವರ ಕ್ರಮ ಖಂಡನಾರ್ಹವಾದುದು ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬ್ರಾಯ್‌ ಕುಷ್ಟಗಿ, ಮಾಜಿಶಾಸಕ ಗುಂಡಪ್ಪ ವಕೀಲ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಜಿಲ್ಲಾ ಸಹ ವಕ್ತಾರ ಗುರುನಾಥ ರಾಜಗೀರಾ, ಮುಖಂಡರಾದ ವಸಂತಕುಮಾರ, ಗುರುನಾಥ ಜ್ಯಾಂತಿಕರ್‌, ಶಿವರಾಜ ಅಲ್ಮಾಜೆ, ಧೋಂಡಿಬಾರಾವ್‌, ಜೈಭೀಮ್‌ ಬಂತೋ, ಬಸವರಾಜ, ರವಿ ನಿಜಾಮಪೂರೆ ಹಾಜರಿದ್ದರು.

‘ಇದು ಹಿಂದೂಸ್ತಾನ, ಪಾಕಿಸ್ತಾನವಲ್ಲ’

‘ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರ ಬಗ್ಗೆ ಕಾಂಗ್ರೆಸ್‌ ಸಚಿವರು ಗೌರವದಿಂದ ಮಾತನಾಡಬೇಕು. ಆದರೆ, ಮನಬಂದಂತೆ ಮಾತನಾಡುತ್ತಿದ್ದಾರೆ. ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರು ರಾಜ್ಯಪಾಲರನ್ನು ಟೀಕಿಸಿದ್ದಾರೆ. ಇದು ಹಿಂದೂಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶವಲ್ಲ. ಬೇರೆಯವರ ಬಗ್ಗೆ ಗೌರವಪೂರ್ವಕವಾಗಿ ಮಾತನಾಡುವುದು ಕಲಿಯಬೇಕು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅವರು ಬಾಂಗ್ಲಾದೇಶದ ಮಾದರಿಯಲ್ಲಿ ರಾಜ್ಯಪಾಲರ ಕಚೇರಿಗೆ ನುಗ್ಗುತ್ತೇವೆ ಎಂದು ಹೇಳಿದ್ದಾರೆ. ಅವರು ಬೇಕಾದರೆ ಬಾಂಗ್ಲಾದೇಶಕ್ಕೆ ಹೋಗಲಿ’ ಎಂದು ಶಾಸಕ ಪ್ರಭು ಚವಾಣ್‌ ತಿರುಗೇಟು ನೀಡಿದರು.

ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ ಗುಂಡೂರಾವ್‌ ಸೇರಿದಂತೆ ಇತರೆ ಮಂತ್ರಿಗಳು ಮನಬಂದಂತೆ ರಾಜ್ಯಪಾಲರ ವಿರುದ್ಧ ಅಗೌರವದಿಂದ ಮಾತನಾಡುತ್ತಿದ್ದಾರೆ. ಗೂಂಡಾಗಿರಿ ಭಾಷೆ ಬಳಸುತ್ತಿದ್ದಾರೆ. ಮುಖ್ಯಮಂತ್ರಿಗಳು ಇವರ ನಾಲಿಗೆಗೆ ಬ್ರೇಕ್‌ ಹಾಕಬೇಕು. ಜಮೀರ್‌ ಅಹಮ್ಮದ್‌ ಖಾನ್‌ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು. ಐವನ್‌ ಡಿಸೋಜಾ ಅವರ ಪ್ರಚೋದನಕಾರಿ ಭಾಷಣ ಖಂಡನಾರ್ಹ. ಸರ್ಕಾರ ನಡೆಸುತ್ತಿರುವವರು ಪ್ರಚೋದನಕಾರಿ ಮಾತುಗಳನ್ನಾಡುತ್ತಿರುವುದು ಶೋಭೆ ತರುವ ಸಂಗತಿಯಲ್ಲ ಎಂದು ಕುಟುಕಿದರು.

'ಉಸ್ತುವಾರಿ ಸಚಿವರು ಗುಂಡಿ ಮುಚ್ಚಿಸಲಿ’

‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು, ಮಳೆಗೆ ಜಿಲ್ಲೆಯಲ್ಲಿ ಬಿದ್ದಿರುವ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು. ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಯಾವುದೇ ಕೆಲಸಗಳಾಗುತ್ತಿಲ್ಲ. ಉಸ್ತುವಾರಿ ಸಚಿವರು ಕೇವಲ ಬಿಜೆಪಿಯನ್ನು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಶಾಸಕ ಪ್ರಭು ಚವಾಣ್‌ ಟೀಕಿಸಿದರು.

ಇಂದು ಬಿಜೆಪಿ ಪ್ರತಿಭಟನೆ

ದಲಿತ ಸಂಘಟನೆಗಳು ಬರಲಿ

‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಆದೇಶವಾಗಿದೆ. ಅವರು ನೈತಿಕ ಹೊಣೆ ಹೊತ್ತು ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಬೀದರ್‌ ನಗರದಲ್ಲಿ ಗುರುವಾರ (ಆ.22) ಪ್ರತಿಭಟನೆ ನಡೆಸಲಾಗುವುದು. ಬೆಳಿಗ್ಗೆ 10ಕ್ಕೆ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್‍ಯಾಲಿ ನಡೆಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ ತಿಳಿಸಿದರು.

ಸಿ.ಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವ ರಾಜ್ಯಪಾಲರು ದಲಿತ ಸಮುದಾಯಕ್ಕೆ ಸೇರಿದವರು. ಅವರನ್ನು ಕಾಂಗ್ರೆಸ್‌ನವರು ಅಪಮಾನ ಮಾಡಿದ್ದಾರೆ. ಹಾಗಾಗಿ ಎಲ್ಲ ದಲಿತ ಸಂಘಟನೆಗಳ ಮುಖಂಡರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪಿಎಂ, ಸಿಎಂ ಎಲ್ಲರಿಗೂ ಇದು ಅನ್ವಯಿಸುತ್ತದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ.
–ಪ್ರಭು ಚವಾಣ್‌, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.