ಬೀದರ್: ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಅಭಿನಯ ಶಾರದೆ ಜಯಂತಿ ಅವರು ಅಭಿನಯಿಸಿರುವ ಚಲನಚಿತ್ರ ಗೀತೆಗಳ ‘ಪ್ರಜಾವಾಣಿ ಲೈವ್’ ಕಾರ್ಯಕ್ರಮ ಇಲ್ಲಿಯ ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ನಡೆಯಿತು.
ಗಾಯಕಿ ರೇಖಾ ಅಪ್ಪಾರಾವ್ ಸೌದಿ ಅವರು 1971ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಚಲನಚಿತ್ರದ ‘ಎಲ್ಲೇ ಇರು, ಹೇಗೆ ಇರು, ಎಂದೆಂದೂ ಮನದಲ್ಲಿ ನೀ ತುಂಬಿರು..‘, 1972ರಲ್ಲಿ ತೆರೆ ಕಂಡ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ‘ವಿರಹಾ...ವಿರಹಾ, ನೂರು ನೂರು ತರಹ, ವಿರಹಾ, ಪ್ರೇಮ ಕಾವ್ಯದಾ ಕಹಿ ಬರಹ...’ ಹಾಡಿ ಪ್ರೇಕ್ಷಕರ ಮಂತ್ರಮುಗ್ದಗೊಳಿಸಿದರು.
1980ರಲ್ಲಿ ಬಂದ ಜನುಮ ಜನುಮದ ಅನುಬಂಧ ಚಿತ್ರದ ‘ತಂಗಾಳಿಯಲ್ಲಿ ನಾನು ತೇಲಿ ಬಂದೆ..‘, 1976ರ ಮಾಂಗಲ್ಯ ಭಾಗ್ಯ ಚಿತ್ರದ ‘ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ, ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ..’ ಗೀತೆ ಹಾಡಿ ಕೇಳುಗರ ಮೆಚ್ಚುಗೆಗೆ ಪಾತ್ರರಾದರು.
1967ರಲ್ಲಿ ಬಿಡುಗಡೆಯಾದ ನಕ್ಕರೆ ಅದೇ ಸ್ವರ್ಗ ಚಿತ್ರದ ‘ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ...’, 1965ರಲ್ಲಿ ಬಂದ ಮಿಸ್ ಲೀಲಾವತಿ ಚಿತ್ರದ ‘ದೋಣಿ ಸಾಗಲಿ ಮುಂದೆ ಹೋಗಲಿ..ದೂರ ತೀರವ ಸೇರಲಿ’, ‘ನೋಡು ಬಾ ನೋಡು ನಮ್ಮೂರ...‘, 1977ರಲ್ಲಿ ತೆರೆಕಂಡ ತಾಯಿಗಿಂತ ದೇವರಿಲ್ಲ ಚಿತ್ರದ ‘ನೀ ತಂದ ಭಾಗ್ಯ ನನ್ನದಾಗಿದೆ..ಜೀವಾ ನೋವಾ ಮರೆತು ಹಾಡಿದೆ’, 1992ರ ಬೆಳ್ಳಿ ಮೋಡಗಳು ಚಿತ್ರದ ‘ಭೂಮಿಯಲಿ ಚೆಂದಿರನ...‘, ರಸಿಕ ಚಿತ್ರದ ‘ಹಾಡೊಂದು ಹಾಡಬೇಕು...‘, ಹಾಡಿನ ಮೂಲಕ ಶ್ರೋತೃಗಳ ಮನತಣಿಸಿದರು.
1970ರ ಪರೋಪಕಾರ ಚಿತ್ರದ ‘ಹೋದರೆ ಹೋಗು ನನಗೇನು, ಕೋಪದ ತಾಪದ ಫಲವೇನು?...’, 1976ರ ಬಹಾದ್ದೂರ್ ಗಂಡು ಚಿತ್ರದ ‘ಮಾನವನಾಗುವೆಯಾ ಇಲ್ಲ ಧಾನವನಾಗುವೆಯಾ, ನೀ ಮಾನವ ಕುಲಕೆ ಮುಳ್ಳಾಗುವೆಯಾ...‘ ಹಾಡಿನ ಮೂಲಕ ನಟಿ ಜಯಂತಿ ಹಾಗೂ ಡಾ.ರಾಜಕುಮಾರ ಅಭಿನಯದ ಚಿತ್ರ ಕಣ್ಮುಂದೆ ಬರುವಂತೆ ಮಾಡಿದರು.
ರೇಖಾ ಅವರಿಗೆ ಸಹ ಗಾಯಕ ಅಮಿತ್ ಜನವಾಡಕರ್ ಸಾಥ್ ನೀಡಿದರು. ಸೊಲ್ಲಾಪುರದ ಸ್ಟಾರ್ ಅಫ್ ಮೆಲೊಡಿ ವಾದ್ಯವೃಂದ ಸಂಗೀತದ ಮೂಲಕ ಪ್ರೇಕ್ಷಕರ ಮನ ಗೆದ್ದಿತು.
ಉಪನ್ಯಾಸಕಿ ಡಿ.ಸೌಮ್ಯ ಅವರು ತೆಲಗಿನ ಜಯಂತಿ ಕನ್ನಡ ಚಿತ್ರರಂಗಕ್ಕೆ ಬಂದ ಅಪರೂಪದ ಪ್ರಸಂಗ ಹಾಗೂ ಚಲನಚಿತ್ರಗಳಲ್ಲಿ ಎಲ್ಲ ಪಾತ್ರಗಳಲ್ಲೂ ಅಭಿನಯಿಸಿದ್ದನ್ನು ಚಲನಚಿತ್ರಗಳ ಹೆಸರು ಉಲ್ಲೇಖಿಸುವ ಮೂಲಕ ಎಳೆ ಎಳೆಯಾಗಿ ವಿವರಿಸಿದರು. ‘ಮಡಿವಂತಿಕೆ ಬದಿಗಿರಿಸಿ ಯಾವುದೇ ಮುಜುಗರ ಇಲ್ಲದೇ ಬಿಕಿನಿ ಧರಿಸಿ ಪಾತ್ರ ಮಾಡಿದ ಕನ್ನಡ ಚಿತ್ರರಂಗದ ಮೊದಲ ನಟಿ’ ಎಂದು ಬಣ್ಣಿಸಿದರು.
ಆರಂಭದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 75 ಹಣತೆಗಳಲ್ಲಿ ದೀಪ ಬೆಳಗಿಸಲಾಯಿತು. ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ದೀಪ ಬೆಳಗಿಸಿ ಕಲಾವಿದರಿಗೆ ಶುಭ ಕೋರಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ, ಪ್ರಜಾವಾಣಿ ಜಿಲ್ಲಾ ಹಿರಿಯ ವರದಿಗಾರ ಚಂದ್ರಕಾಂತ ಮಸಾನಿ ಇದ್ದರು.
ತಾರೆ ಗಿರಿಜಾ ಲೋಕೇಶ್ ಸ್ಮರಿಸಿದರು. ಅಪಾರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ‘ಪ್ರಜಾವಾಣಿ ಲೈವ್’ನಲ್ಲಿ ಕಾರ್ಯಕ್ರಮ ವೀಕ್ಷಿಸಿ ಆನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.