ADVERTISEMENT

‘ಪ್ರಜಾವಾಣಿ’ ಫೋನ್‌ ಇನ್‌ | ಬೀದರ್: ತೇವಾಂಶ ನೋಡಿ ಬಿತ್ತನೆ ಮಾಡಲು ಸಲಹೆ

ಬೀಜ, ರಸಗೊಬ್ಬರ ಖರೀದಿಸಿದ ರಸೀದಿ ಬೆಳೆ ಕಟಾವಿನ ತನಕ ಇಟ್ಟುಕೊಳ್ಳಿ–ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:29 IST
Last Updated 13 ಜೂನ್ 2024, 15:29 IST
ಡಾ. ರತೇಂದ್ರನಾಥ ಸುಗೂರ, ಜಂಟಿ ಕೃಷಿ ನಿರ್ದೇಶಕ
ಡಾ. ರತೇಂದ್ರನಾಥ ಸುಗೂರ, ಜಂಟಿ ಕೃಷಿ ನಿರ್ದೇಶಕ   

ನಿರ್ವಹಣೆ: ಶಶಿಕಾಂತ ಎಸ್‌. ಶೆಂಬೆಳ್ಳಿ

ಬೀದರ್‌: ‘ಮಣ್ಣಿನಲ್ಲಿ ತೇವಾಂಶ ನೋಡಿ ಬಿತ್ತನೆ ಮಾಡುವುದು ಸೂಕ್ತ. ತೇವಾಂಶ ಹೆಚ್ಚಿದಾಗ ಬೀಜ ಬಿತ್ತನೆ ಮಾಡಿದರೆ ಅದು ಮಣ್ಣಿನಲ್ಲಿ ಕೊಳೆತು ಹೋಗಬಹುದು’

ಇದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ ಅವರ ಸಲಹೆ. ‘ಪ್ರಜಾವಾಣಿ’ಯಿಂದ ನಗರದ ಕೃಷಿ ಇಲಾಖೆಯ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಿಂಧನಕೇರಾದ ಭೀಮರೆಡ್ಡಿ ಸೇರಿದಂತೆ ಇತರೆ ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾತನಾಡಿದರು.

ADVERTISEMENT

ಜಮೀನು ಹಸಿಯಾದರೆ ಬಿತ್ತನೆ ಮಾಡುವುದು ಸೂಕ್ತ. ಆದರೆ, ಸತತ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶ ಇದ್ದರೆ ಬೇಡ. ಬೀಜ ಬಿತ್ತನೆಗೂ ಮುನ್ನ ರೈತರು ‘ಟ್ರೈಕೋಡರ್ಮಾ’, ‘ರೈಜೋಬೀಮ್‌’ ಬೀಜೋಪಚಾರ ಮಾಡಬೇಕು. ಸೋಯಾ ಅವರೆ ಜೊತೆಗೆ ಮಿಶ್ರ ಬೆಳೆ ಬೆಳೆಯವುದನ್ನು ಜಿಲ್ಲೆಯ ರೈತರು ರೂಢಿಸಿಕೊಳ್ಳಬೇಕು. ಡಿಎಪಿ ರಸಗೊಬ್ಬರದ ಬದಲಾಗಿ ಪರ್ಯಾಯ ಗೊಬ್ಬರಗಳನ್ನು ಬಳಸಬಹುದು ಎಂದರು.

ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ರಸಗೊಬ್ಬರದ ಅಗತ್ಯ ದಾಸ್ತಾನು ಇದೆ. ಈಗಾಗಲೇ ಜಿಲ್ಲೆಯಲ್ಲಿ ಶೇ 70ರಷ್ಟು ಬೀಜ, ರಸಗೊಬ್ಬರ ರೈತರಿಗೆ ವಿತರಿಸಲಾಗಿದೆ. ಖರೀದಿಸಿದ ಬೀಜ, ರಸಗೊಬ್ಬರದ ರಸೀದಿಯನ್ನು ರೈತರು ಬೆಳೆ ಕಟಾವಿನ ತನಕ ಜತನದಿಂದ ಇಟ್ಟುಕೊಳ್ಳಬೇಕು. ಒಂದುವೇಳೆ ಏನಾದರೂ ಸಮಸ್ಯೆ ಉದ್ಭವಿಸಿದರೆ ಪ್ರಶ್ನಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ರೈತರ ಕೆಲ ಆಯ್ದ ಪ್ರಶ್ನೋತ್ತರಗಳ ವಿವರ ಇಂತಿದೆ.

ಪ್ರಶ್ನೆ: ಉಮೇಶ ಖಟಕಚಿಂಚೋಳಿ– ಸೋಯಾ, ಹೆಸರು ಹೇಗೆ ಬೆಳೆಯಬೇಕು. ಮಾರುಕಟ್ಟೆ ವ್ಯವಸ್ಥೆ ಬಗೆಗಿನ ಗೊಂದಲ ಬಗೆಹರಿಸಿ.

–ಮೂರು ಸಾಲು ಸೋಯಾ ಅವರೆ, ಅದರಲ್ಲಿ ಒಂದು ಸಾಲು ತೊಗರಿ ಹಾಕಬಹುದು. ಸೋಯಾ ಹೆಸರು ಅಥವಾ ಸೋಯಾ ತೊಗರಿ ಕೂಡ ಬೆಳೆಸಬಹುದು. ಭಾಲ್ಕಿ ಹಾಗೂ ಬೀದರ್‌ನಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಯಾ ಮಾರಾಟ ಮಾಡಬಹುದು. ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.


ಪ್ರಶ್ನೆ: ರಾಜಕುಮಾರ, ಇಲ್ಲಾಳ–ಮುಂಗಾರು ಹಂಗಾಮಿನಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ? ನೆಲ ಸಾಕಷ್ಟು ಹಸಿ ಇದೆ ಏನು ಮಾಡುವುದು?

–ಸೋಯಾ, ತೊಗರಿ, ಹೆಸರು, ಉದ್ದು ಬೆಳೆಯಬಹುದು. ನೆಲ ಸಾಕಷ್ಟು ಹಸಿಯಿದ್ದರೆ ಎರಡ್ಮೂರು ದಿನ ಬಿಟ್ಟು ಬಿತ್ತನೆ ಮಾಡುವುದು ಸೂಕ್ತ.


ಪ್ರಶ್ನೆ: ರಾಜಶೇಖರ, ದಾಡಗಿ–ಹೆಸರು, ಉದ್ದು ಬಿತ್ತನೆ ಮಾಡಿದ ನಂತರ ಬಹಳ ಮಳೆಯಾಗಿದೆ. ಏನು ಮಾಡೋದು?

–ಎರಡ್ಮೂರು ದಿನಗಳ ವರೆಗೆ ನಿರೀಕ್ಷಿಸಿ. ಮೊಳಕೆ ಏಳುತ್ತವೆಯೇ ಇಲ್ಲವೇ ಎಂಬುದನ್ನು ನೋಡಿ ಮುಂದುವರೆಯಿರಿ.


ಪ್ರಶ್ನೆ: ರಾಜಶೇಖರ ರಾವ್‌, ರಾಜೇಶ್ವರ–ಹೋದ ವರ್ಷ ತೊಗರಿಗೆ ನೆಟೆ ರೋಗದಿಂದ ಹಾನಿಯಾಗಿತ್ತು. ಅನೇಕರಿಗೆ ಪರಿಹಾರ ಕೊಟ್ಟಿಲ್ಲವೇಕೆ?

–ಜಿಲ್ಲೆಯಲ್ಲಿ ಸರ್ವೇ ಮಾಡಿ ಅದರ ಪ್ರಕಾರ ಪರಿಹಾರ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 54 ಸಾವಿರ ರೈತರಿಗೆ ಒಟ್ಟು ₹14.35 ಕೋಟಿ ಪರಿಹಾರ ವಿತರಿಸಲಾಗಿದೆ. ಇನ್ನು, ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ₹41.69 ಕೋಟಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.


ಪ್ರಶ್ನೆ: ವಿದ್ಯಾಸಾಗರ್‌, ಮೊಳಕೇರಾ–ಪ್ರತಿ ವರ್ಷ ರೈತ ಸಂಪರ್ಕ ಕೇಂದ್ರಗಳಿಂದ ಬೀಜ ಖರೀದಿಸಿ ಸೋಯಾ, ತೊಗರಿ ಬೆಳೆಯುತ್ತಿದ್ದೇನೆ. ಆದರೆ, ಖಾಸಗಿಯಲ್ಲಿ ಬೀಜ ಖರೀದಿಸಿದವರ ಇಳುವರಿ ನನಗಿಂತಲೂ ಹೆಚ್ಚಿಗೆ ಬರುತ್ತಿದೆ. ಇದಕ್ಕೆ ಕಾರಣವೇನು?

–ಸಿದ್ದಾರ್ಥ, ವರುಣ್‌, ಪಾರಸ್‌, ಹೀರಾ ಮೋತಿ ಬೀಜಗಳು ಎಲ್ಲ ಕಡೆಗೆ ಸಿಗುತ್ತವೆ. ಅವುಗಳನ್ನೇ ಬಿತ್ತನೆಗೆ ಬಳಸಬೇಕು. ಬೆಳೆಯಲ್ಲಿ ರೋಗ ಬಿದ್ದಾಗ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಜಮೀನಿನಲ್ಲಿ ಪೌಷ್ಟಿಕಾಂಶ ಕಡಿಮೆಯಾದರೂ ಇಳುವರಿ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಮಾಣೀಕೃತ ಬೀಜಗಳನ್ನು ವಿತರಿಸಲಾಗುತ್ತದೆ. ಯಾವುದಕ್ಕೂ ಒಂದು ಸಲ ಮಣ್ಣಿನ ಪರೀಕ್ಷೆ ಮಾಡಿಸಿ, ಅದರಲ್ಲಿ ಸತ್ವ ಇದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತದೆ.

ಪ್ರಶ್ನೆ: ಭೀಮಣ್ಣ, ಕಮಲಾಪುರ–ಯಾವ ಗೊಬ್ಬರ ಬಳಸುವುದು ಸೂಕ್ತ?

–‘ಬಾರಾ ಬತ್ತಿ ಸೋಳಾ’, ಕಾಂಪ್ಲೆಕ್ಸ್‌ ಗೊಬ್ಬರ ಕೂಡ ಹೆಸರು, ಉದ್ದಿಗೆ ಬಳಸಬಹುದು.

ಪ್ರಶ್ನೆ: ರಾಮ ಮಜಗೆ, ನೀರಗುಡಿ–ಹೆಚ್ಚು ಇಳುವರಿ ಕೊಡುವ ತೊಗರಿ, ಸೋಯಾ ಯಾವುದೆಂದು ಹೇಳುವಿರಾ?

–ತೊಗರಿಗೆ ಜಿಆರ್‌ಜಿ–152, ಜಿಆರ್‌ಜಿ–811, ಸೋಯಾಕ್ಕೆ ಕೆಡಿಎಸ್‌–726, ವರುಣ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಬೀಜಗಳನ್ನು ಉಪಯೋಗಿಸಬಹುದು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹಾಜರಿದ್ದ ಅಧಿಕಾರಿಗಳು–ಕೃಷಿ ತಾಂತ್ರಿಕಾ ಅಧಿಕಾರಿಗಳಾದ ಕೈಲಾಶ್‌, ಜಮೀರ್‌, ಬೀಜ ನಿಗಮದ ವ್ಯವಸ್ಥಾಪಕ ರವಿಕುಮಾರ, ಸಹಕಾರ ಮಾರುಕಟ್ಟೆಯ ವ್ಯವಸ್ಥಾಪಕ ಮಲ್ಲಿಕಾರ್ಜುನ, ‘ಸೋಂಪೊ ಇನ್‌ಶೂರೆನ್ಸ್‌’ ಕಂಪನಿಯ ಜಿಲ್ಲಾ ಸಂಯೋಜಕ ದಸ್ತಗೀರ, ‘ಇಫ್ಕೋ’ ಜಿಲ್ಲಾ ವ್ಯವಸ್ಥಾಪಕ ಸುರೇಶ.

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷಿ ಇಲಾಖೆಯ ಅಧಿಕಾರಿಗಳು

ವಾಡಿಕೆಗಿಂತ ಅಧಿಕ ಮಳೆ

ಜಿಲ್ಲೆಯಲ್ಲಿ ಜೂನ್‌ 1ರಿಂದ 12ರ ವರೆಗೆ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ 41.50 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಆದರೆ 98.20 ಮಿ.ಮೀ ವರ್ಷಧಾರೆಯಾಗಿದೆ ಎಂದು ಡಾ. ರತೇಂದ್ರನಾಥ ಸುಗೂರ ತಿಳಿಸಿದರು. ಇಲಾಖೆಯಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 108760 ಕ್ವಿಂಟಲ್‌ ವಿವಿಧ ಬೆಳೆಗಳ ಬಿತ್ತನೆ ಬೀಜಗಳು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇಡಲಾಗಿದೆ. ರಿಯಾಯಿತಿ ದರದಲ್ಲಿ ಇದುವರೆಗೆ 74626 ಕ್ವಿಂಟಲ್‌ ಬೀಜ ರೈತರಿಗೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಸಕ್ತ ಸಾಲಿನಲ್ಲಿ ಒಟ್ಟು 415569 ಹೆಕ್ಟೇರ್‌ ಬಿತ್ತನೆ ಕ್ಷೇತ್ರ ಗುರಿ ಹೊಂದಿದ್ದು ಇದುವರೆಗೆ 16011 ಹೆಕ್ಟೇರ್‌ನಲ್ಲಿ ಬಿತ್ತನೆ ಮುಗಿದಿದೆ. ಇನ್ನುಳಿದ ಕಡೆ ಬಿತ್ತನೆ ನಡೆದಿದೆ. 36433 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನಿದ್ದು ಇದುವರೆಗೆ 14307 ಮೆಟ್ರಿಕ್‌ ಟನ್‌ ರಸಗೊಬ್ಬರ ರೈತರಿಗೆ ವಿತರಿಸಲಾಗಿದೆ. ಇನ್ನು 26115 ಮೆಟ್ರಿಕ್‌ ಟನ್‌ ದಾಸ್ತಾನು ಇದೆ ವಿವರಿಸಿದರು.

ಬೆಳೆ ವಿಮೆಗೆ ಹೊಸ ಮಾರ್ಗಸೂಚಿ

‘ಸರ್ಕಾರವು ಬೆಳೆ ವಿಮೆಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆಯಡಿ 2024–25 2025–26ನೇ ಸಾಲಿಗೆ ಪರ್ಯಾಯ ಬೆಳೆ ವಿಮಾ ಯೋಜನೆ ‘ಕಪ್‌ ಅಂಡ್‌ ಕ್ಯಾಪ್‌’ ಮಾದರಿಯನ್ನು ಅಳವಡಿಸಿಕೊಳ್ಳಲು ಅನುಮೋದನೆ ದೊರೆತಿದೆ. 2024–25ರ ಮುಂಗಾರು ಹಂಗಾಮಿನಿಂದ 80:110ರ ಅನುಪಾತ ಮಾದರಿಯಲ್ಲಿ ಅಳವಡಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುವುದು’ ಎಂದು ಡಾ. ರತೇಂದ್ರನಾಥ ಸುಗೂರ ತಿಳಿಸಿದರು. ರೈತರು ಬರುವ ಜುಲೈ 31ರ ಒಳಗೆ ವಿಮೆ ಮಾಡಿಸಿಕೊಳ್ಳಬೇಕು. ಸೂರ್ಯಕಾಂತಿ ಬೆಳೆಗೆ ಆಗಸ್ಟ್‌ 16ರ ವರೆಗೆ ಅವಕಾಶ ಇದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.