ADVERTISEMENT

ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ರಸ್ತೆ ತಡೆ ಇಂದು

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 16:22 IST
Last Updated 19 ಜೂನ್ 2024, 16:22 IST

ಭಾಲ್ಕಿ: ‘ರಾಜ್ಯ ಕಾಂಗ್ರೆಸ್ ಸರ್ಕಾರ ದಿಢೀರ್ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಜೂನ್‌ 20ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಲಿದೆ’ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ತಿಳಿಸಿದರು.

ಪಟ್ಟಣದ ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ರಾಜ್ಯದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನರಿಗೆ ಬೆಲೆ ಏರಿಕೆ ಮಾಡುವುದು ಸರಿಯಲ್ಲ’ ಎಂದರು.

‘ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ. ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವೆಂದು ಹೇಳಿ ಟಿಕೆಟ್ ದರ ಏರಿಕೆ ಮಾಡಿದೆ. ಎಲ್ಲ ಮಹಿಳೆಯರಿಗೆ ಪ್ರತಿ ತಿಂಗಳಿಗೆ ₹2 ಸಾವಿರ ನೀಡುವುದಾಗಿ ಹೇಳಿದ ಕಾಂಗ್ರೆಸ್ ಇದೀಗ ಕುಟುಂಬದ ಒಬ್ಬರಿಗೆ ಮಾತ್ರ ಹಣ ನೀಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಬೆಲೆ ಏರಿಕೆ ಮತ್ತು ಕಾಂಗ್ರೆಸ್ ದುರಾಡಳಿತದಿಂದ ರೋಸಿ ಹೋಗಿದ್ದ ಜನ ರಾಜ್ಯದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಆದರೂ ಕೂಡ ಜನರ ನೋವು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಸರ್ಕಾರ ಇದೀಗ ಪೆಟ್ರೋಲ್-ಡಿಸೇಲ್ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ’ ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ಕಾರಬಾರಿ ಮಾತನಾಡಿದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಜ ಗಂದಗೆ, ಪ್ರಧಾನ ಕಾರ್ಯದರ್ಶಿ ಸುರೇಶ ಬಿರಾದಾರ, ಪ್ರಮುಖರಾದ ಬಾಬುರಾವ್ ಧೂಪೆ, ಉತ್ತಮ ಪೂರಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.