ಬಸವಕಲ್ಯಾಣ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚಾಗುತ್ತಿರುವ ಕಾರಣ ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿದರು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅಭಿಪ್ರಾಯಪಟ್ಟರು.
ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ರಾಹುಲ್ ಗಾಂಧಿ ವಿರುದ್ಧದ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದಿಂದ ನಡೆದ ಪ್ರತಿಭಟನೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪ್ರಧಾನಿ ಮೋದಿ ಮತ್ತು ಉದ್ಯಮಿ ಅದಾನಿ ಮಧ್ಯದ ಸಂಬಂಧದ ಬಗ್ಗೆ ರಾಹುಲ್ ಗಾಂಧಿಯವರು ಮೊದಲಿನಿಂದಲೇ ಟೀಕಿಸುತ್ತ ಬಂದಿದ್ದಾರೆ. ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಆಗಾಗ ಬಲವಾಗಿ ಖಂಡಿಸಿದ್ದಾರೆ. ಅವರ ಭಾರತ ಜೋಡೋ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದೆಲ್ಲವನ್ನು ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ಅವರ ಸಮರ್ಥನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಲಹೆ ಮೇರೆಗೆ ಪ್ರತಿಭಟನೆ ನಡೆಸಲಾಗಿದೆ’ ಎಂದರು.
‘ಶಾಸಕ ಶರಣು ಸಲಗರ ಗೋಹತ್ಯೆ ತಡೆಯುವ ನೆಪದಲ್ಲಿ ಯಾರದ್ದೋ ಮನೆಗೆ ಹೋಗಿ ಗಲಾಟೆ ಮಾಡಿರುವುದು ತಪ್ಪು. ಶಾಸಕರಾದವರಿಗೆ ಇದು ಶೋಭೆ ತರುವುದಿಲ್ಲ. ಜಾತಿ, ಧರ್ಮದ ಆಧಾರದಲ್ಲಿ ಜಗಳ ಹಚ್ಚುವುದು ಸರಿಯಲ್ಲ. ಅವರು ಕಾನೂನು ಕೈಗೆತ್ತಿಕೊಂಡಿದ್ದರಿಂದ ಅವರ ಮೇಲೆ ಪ್ರಕರಣ ದಾಖಲಾಗಿದೆ. ನಾನೇಕೆ ಇದಕ್ಕಾಗಿ ಗೃಹ ಸಚಿವರ ಹತ್ತಿರ ಹೋಗಲಿ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ನಗರ ಘಟಕದ ಅಧ್ಯಕ್ಷ ಅಜರ್‌ಅಲಿ ನವರಂಗ, ಮುಖಂಡರಾದ ಶಾಂತಪ್ಪ ಪಾಟೀಲ, ರವಿ ಬೋರೋಳೆ, ಮನೋಹರ ಮೈಸೆ, ಚಂದ್ರಕಾಂತ ಮೇತ್ರೆ, ಯುವರಾಜ ಭೆಂಡೆ, ಸುಧಾಕರ ಗುರ್ಜರ, ಶಂಕರರಾವ ಜಮಾದಾರ, ಶೇಖ್ ರೈಸೊದ್ದೀನ್, ಅಮಾನತ್ ಅಲಿ, ಬಸವರಾಜ ಸ್ವಾಮಿ, ಆನಂದ ಪಾಟೀಲ, ಸುರೇಶ ಮೋರೆ, ರಾಮ ಜಾಧವ, ಸಂತೋಷ ಗುತ್ತೇದಾರ, ಶಿವಕುಮಾರ ಶೆಟಗಾರ, ಶಿವಕುಮಾರ ಬಿರಾದಾರ, ಸಿಕಂದರ ಶಿಂಧೆ, ಅಶೋಕ ಮದಾಳೆ, ಸವಿತಾ ಕಾಂಬಳೆ, ಆನಂದ ಹೊನ್ನಾನಾಯಕ, ಭೀಮಾ ಫುಲೆ ಹಾಗೂ ಯೋಗೇಶ ಗುತ್ತೇದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.