ಬೀದರ್: ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ದೊರಕದ ಕಾರಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪರಿಷತ್ ಪ್ರಮುಖರು ಹೇಳಿದರು.
ಸದ್ಯ ಕಾಲೇಜುಗಳು ಆರಂಭವಾಗಿವೆ. ತರಗತಿಗೆ ಹಾಜರಾಗಲು ವಿವಿಧ ಊರುಗಳ ವಿದ್ಯಾರ್ಥಿಗಳು ನಗರ, ಪಟ್ಟಣಗಳಲ್ಲಿ ಇರುವ ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಅಂತಿಮ ವರ್ಷದ ವಿದ್ಯಾರ್ಥಿಗಳ ಹಾಸ್ಟೆಲ್ ಮಾತ್ರ ತೆರೆದಿದ್ದು, ಉಳಿದ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ದೂರಿದರು.
ಎಲ್ಲ ಕಾಲೇಜು ಹಾಸ್ಟೆಲ್‍ಗಳನ್ನು ಆರಂಭಿಸಬೇಕು. ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಬಸ್ ಓಡಿಸಬೇಕು. ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಪಾಸ್ ಕೊಡಬೇಕು. ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರು ಇಲ್ಲದ ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕು. ಅವರಿಗೆ ವರ್ಷದ 12 ತಿಂಗಳು ವೇತನ ನೀಡಬೇಕು. ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್, ನಗರ ಘಟಕದ ಉಪಾಧ್ಯಕ್ಷ ನಾಗೇಶ ಬಿರಾದಾರ, ವಿಕಾಸ ಚೋರಮಲ್ಲೆ, ಸಾಯಿ ಮೂಲಗೆ, ಅರವಿಂದ ಸುಂದಾಳಕರ್, ಕಿರಣಕುಮಾರ, ಪ್ರದೀಪ ರೆಡ್ಡಿ, ಶಿವಕಾಂತ ಉಪ್ಪಿನ್, ಪ್ರೀತಿಸಿಂಗ್, ಅಭಿಷೇಕ ಉಪ್ಪೆ, ಮೀನಾಕ್ಷಿ, ವೆಂಜಲಾ, ರಂಜಿತಾ, ಪ್ರಿಯಾಂಕಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.