ADVERTISEMENT

ಹುಮನಾಬಾದ್: ಜಮೀನುಗಳಿಗೆ ಲಗ್ಗೆ ಇಡುತ್ತಿರುವ ವನ್ಯಜೀವಿಗಳು

ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ: ಬೆಳೆ ಹಾನಿ ಪರಿಹಾರ ನೀಡಲು ಅರಣ್ಯ ಇಲಾಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 4:27 IST
Last Updated 6 ನವೆಂಬರ್ 2024, 4:27 IST
<div class="paragraphs"><p>ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿ ಗ್ರಾಮದಲ್ಲಿ ಹಂದಿಗಳ ದಾಳಿಯಿಂದ ಬೆಳೆ ಹಾಳಾಗಿರುವುದು</p></div>

ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿ ಗ್ರಾಮದಲ್ಲಿ ಹಂದಿಗಳ ದಾಳಿಯಿಂದ ಬೆಳೆ ಹಾಳಾಗಿರುವುದು

   

ಹುಮನಾಬಾದ್: ವನ್ಯಜೀವಿಗಳ ಕಾಟದಿಂದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಚಿಟಗುಪ್ಪ, ಹುಮನಾಬಾದ್ ತಾಲ್ಲೂಕುಗಳ ಗ್ರಾಮೀಣ ಪ್ರದೇಶದಲ್ಲಿ‌ ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆ. ಕಬ್ಬು, ಭತ್ತ ಮತ್ತು ತೊಗರಿ ಸೇರಿ ಪ್ರತಿಯೊಂದು ಬೆಳೆಯನ್ನೂ ನಾಶ ಮಾಡುತ್ತಿರುವ ವನ್ಯಜೀವಿಗಳು, ಹಗಲು ಹೊತ್ತಿನಲ್ಲೇ ಕೃಷಿ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಹಂದಿಗಳ ಹಿಂಡು, ಮಂಗಗಳು ಸೇರಿದಂತೆ ಅನೇಕ ವನ್ಯಜೀವಿಗಳ ಹಾವಳಿಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗುತ್ತಿದೆ.

ADVERTISEMENT

ಹುಮನಾಬಾದ್ ಅರಣ್ಯ ವಲಯದ ಗ್ರಾಮಗಳಾದ ದುಬಲಗುಂಡಿ, ಹಳ್ಳಿಖೇಡ್‌ ಬಿ., ಕಬೀರಾಬಾದ್, ಜಲಸಂಗಿ, ಹಣಕುಣಿ, ಇಟಗಾ, ಕುಮಾರ್ ಚಿಂಚೋಳಿ, ಹಂದಿಕೇರಾ, ನಂದಗಾಂವ, ಮದರಗಾಂವ, ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಮುತ್ತಂಗಿ, ವಿಠಲಪುರ, ಬೇಮಳಖೇಡಾ, ಚಾಂಗಲೇರಾ, ಕುಡಂಬಲ್ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ರಾತ್ರಿವಿಡೀ ಪ್ರಾಣದ ಹಂಗು ತೊರೆದು ಹೊಲಗಳ ಸುತ್ತ ಓಡಾಡುವಂತಾಗಿದೆ.

‘ಹೆಚ್ಚಿನ ಮಳೆಯ ಕಾರಣಕ್ಕೆ ತೊಗರಿ, ಉದ್ದು, ಹೆಸರು, ಸೋಯಾ ಬೆಳೆಗಳು ಹಾಳಾಗಿವೆ. ಈಗ ಭತ್ತ, ಕಬ್ಬು ಇದೆ.‌ ದಿನಾಲೂ ಹಂದಿಗಳ ಹಿಂಡು ಬಂದು ಹಾಳು ಮಾಡುತ್ತಿದೆ. ರಾತ್ರಿ ಪೂರ್ತಿ ಹೊಲದಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ’ ಎಂದು ನಿರ್ಣಾ–ವಾಡಿ ಗ್ರಾಮದ ರೈತ ಶಿವಕುಮಾರ ಅಳಲು ತೋಡಿಕೊಂಡರು.

‘ಸಾಲ ಮಾಡಿ ಬೆಳೆಯುವ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಅರಣ್ಯ ಇಲಾಖೆಯವರು ಅರಣ್ಯದ ಸುತ್ತ ರಕ್ಷಣಾ ಬೇಲಿ ಹಾಕಿ ಕಾಡು ಪ್ರಾಣಿಗಳನ್ನು ಹೊಲ ಗದ್ದೆಗಳಿಗೆ ಬರದಂತೆ ತಡೆಯಬೇಕು. ಕಾಡು ಪ್ರಾಣಿ ಹಾವಳಿಯಿಂದ ಕಳೆದ ವರ್ಷ ರೈತರು ಬೆಳೆದಿದ್ದ ಬೆಳೆ ಹಾನಿಯಾಗಿತ್ತು. ಅರಣ್ಯ ಇಲಾಖೆ ಪರಿಹಾರ ನೀಡುವುದಾಗಿ ಹೇಳಿತ್ತು. ಆದರೆ ಇಲ್ಲಿಯವರೆಗೂ ಪರಿಹಾರ ಬಂದಿಲ್ಲ’ ಎಂದು ರೈತ ಶಿವಾನಂದ ದೂರಿದ್ದಾರೆ.

‘ಒಂದು ಎಕರೆ ಹೊಲ ಹಸನು ಮಾಡಿ, ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡಬೇಕಾದರೆ ₹25 ಸಾವಿರದಿಂದ ₹30 ಸಾವಿರ ಬೇಕಾಗುತ್ತದೆ. ಇಲ್ಲಿಯವರೆಗೂ ಅರಣ್ಯ ಇಲಾಖೆ ಒಂದೇ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಹೀಗಾದರೆ ರೈತರು ಜೀವನ ಸಾಗಿಸುವುದು ಹೇಗೆ? ಇದರ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಕ್ರಮ ಕೈಗೊಂಡು ಸೂಕ್ತ ಪರಿಹಾರ ನೀಡಬೇಕು’ ಎಂದು ಕರ್ನಾ ಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕರಬಸಪ್ಪ ಹುಡಗಿ ಆಗ್ರಹಿಸಿದರು.

ಚಿಟಗುಪ್ಪ ತಾಲ್ಲೂಕಿನ ನಿರ್ಣವಾಡಿ ಗ್ರಾಮದ ಶಿವಪ್ಪ ಎಂಬುವರ ಹೊಲದಲ್ಲಿ ಹಂದಿಗಳು ಭತ್ತ ಹಾಳು ಮಾಡಿರುವುದು
ನಮ್ಮ ಹೊಲದ ಪಕ್ಕದಲ್ಲೇ ಸುಮಾರು 100 ಎಕರೆ ಅರಣ್ಯ ಪ್ರದೇಶವಿದೆ. ವನ್ಯಜೀವಿಗಳು ಬೆಳೆ ಹಾಳು ಮಾಡುತ್ತಿವೆ. ಕಳೆದ ವರ್ಷ ‌ಸುತ್ತಮುತ್ತ ಬೇಲಿ ಹಾಕುವಂತೆ ಮನವಿ ಮಾಡಲಾಗಿತ್ತು.‌ ಆದರೆ ಪ್ರಯೋಜನವಾಗಿಲ್ಲ
ಶಿವಕುಮಾರ ರೈತ
ಕಾಡು ಪ್ರಾಣಿಗಳಿಂದ ಬೆಳೆ ಹಾಳಾಗಿದ್ದರೆ ಅರ್ಜಿ ಸಲ್ಲಿಸಬೇಕು. ಪರಿಶೀಲಿಸಿ ಇಲಾಖೆ ಪರಿಹಾರ ನೀಡಲಿದೆ
ಐಶ್ವರ್ಯ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.