ಬೀದರ್: ವಿಶ್ವ ಆದಿವಾಸಿ ದಿನದ ಅಂಗವಾಗಿ ಆದಿವಾಸಿ ರಾಜಗೊಂಡ ಸಮುದಾಯದವರು ನಗರದಲ್ಲಿ ಶುಕ್ರವಾರ ರ್‍ಯಾಲಿ ನಡೆಸಿದರು.
ರಾಜಗೊಂಡ ಓಣಿಯ ಜಯ್ ಸೇವಾ ಆಶ್ರಮದಿಂದ ಮೆರವಣಿಗೆ ಪ್ರಾರಂಭಗೊಂಡಿತು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಾಣಿ ದುರ್ಗಾವತಿ, ಕುಪಾರಲಿಂಗೋ ಅವರು ಬಾಬಾ ಸಾಹೇಬರ ಭಾವಚಿತ್ರಗಳಿಗೆ ಪುಷ್ಪ ಗೌರವ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ರಾಜಗೊಂಡರು ಮತ್ತು ಮೇಧಾ (ಪಾರ್ದಿ ) ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಳದ ಹಾಗೂ ಶ್ವೇತ ವರ್ಣದ ಉಡುಗೆ, ಧ್ವಜಗಳೊಂದಿಗೆ ಹೆಜ್ಜೆ ಹಾಕಿದರು. ಕೆಲವು ಮಕ್ಕಳು ಆದಿವಾಸಿಗಳಂತೆ ವಸ್ತ್ರ ಧರಿಸಿ ಗಮನ ಸೆಳೆದರು.
ರಾಜಗೊಂಡ ಸಮಾಜದ ಅಧ್ಯಕ್ಷ ಪಿ.ಟಿ. ಶಾಮು ಮಾತನಾಡಿ, ದೇಶದಲ್ಲಿ ಸುಮಾರು 8 ಕೋಟಿ ಜನ ಆದಿವಾಸಿಗಳಿದ್ದಾರೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ ರಾಜ್ಯಗಳಂತೆ ಬೀದರ್ ಜಿಲ್ಲೆಯಲ್ಲೂ ಆದಿವಾಸಿಗಳ ದಿನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ನಾವು ಆದಿವಾಸಿಗಳೆಂದು ಹೆಚ್ಚಿನವರಿಗೆ ಗೊತ್ತಿಲ್ಲ. ಆದಿವಾಸಿಗಳ ಮೇಲೆ ಆಗುತ್ತಿರುವ ಅತ್ಯಾಚಾರ, ದೌರ್ಜನ್ಯಗಳು ನಿಲ್ಲಬೇಕು. ಸಂವಿಧಾನದಲ್ಲಿ ಕೊಟ್ಟಿರುವ ಹಕ್ಕುಗಳು ಮತ್ತು ಸೌಲಭ್ಯಗಳು ನಮ್ಮ ಸಮಾಜದವರಿಗೆ ಸಿಗಬೇಕು. ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರವು ಆದಿವಾಸಿ ದಿನಾಚರಣೆಯನ್ನು ರಾಷ್ಟೀಯ ರಜಾ ದಿನವಾಗಿ ಘೋಷಿಸಬೇಕು. ಆದಿವಾಸಿಗಳು ಮತ್ತು ಪರಿಶಿಷ್ಟರ ಕಾನೂನುಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಡೆಯಬೇಕು ಎಂದು ರಾಜಗೊಂಡ ಕಾಲೊನಿಯ ಯುವ ಮುಖಂಡ ವಿವೇಕ್ ತಿಳಿಸಿದರು.
ಮೆರವಣಿಗೆಯಲ್ಲಿ ಪಾರ್ದಿ ಸಮಾಜದ ಮುಖಂಡರಾದ ರಾಜೇಂದ್ರ ಪಾರ್ದಿ, ವಿಶಾಲ ಮಹಾರಾಜ, ರತನ್ ಮಹಾರಾಜ್, ರವಿ ಮಾಮಲಾಜಿ ಶಡಮಾಕೆ, ಠಾಕೂರ್ ಉಯಿಕೆ, ಮುನ್ನಾ ಬಾಬು ಉಯಿಕೆ, ವಿವೇಕ್ ರಾಶಿಡಂ, ಪ್ರೇಮ್ ರಾಶಿಡಂ, ದಿನೇಶ ಉಯಿಕೆ, ಸುನೀಲ್ ಷಡಮೇಕ್, ದಿನೇಶ್ ಮಹಾರಾಜ್, ಹರೀಶ್ ಬಾಬು ಪುಶನಾಕೆ, ಸುದರ್ಶನ್ ಶಡ್ಮಾಕೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.