ಹುಮನಾಬಾದ್: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ನಿತ್ಯ 10ರಿಂದ 20 ಹಂದಿಗಳು ಸಾಯುತ್ತಿದ್ದು, ಬಡಾವಣೆಗಳಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವ ಜೊತೆಗೆ ಅವರಲ್ಲಿ ಆತಂಕ ಶುರುವಾಗಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಹಂದಿಗಳು ಸಾಯುತ್ತಿರುವುದು ದಿನೇದಿನೆ ಏರಿಕೆ ಆಗುತ್ತಲೇ ಇದೆ. ಈ ಬಗ್ಗೆ ಪುರಸಭೆ ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಜನರು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಮನಾಬಾದ್ ಪಟ್ಟಣದಲ್ಲಿ ಸದ್ಯ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಹೀಗಾಗಿ ಪಟ್ಟಣದ ಜನರು ಸಹಜವಾಗಿ ತಮ್ಮ ಮನೆಗಳು ಸ್ವಚ್ಛ ಮಾಡಿ ಜಾತ್ರೆ ಸಂಭ್ರಮದಲ್ಲಿದ್ದಾರೆ. ಬಂಧು–ಬಳಗದವರನ್ನು ಮನೆಗೆ ಆಹ್ವಾನಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಹಂದಿಗಳು ಸಾಯುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.
‘ಕಳೆದ ಒಂದು ವಾರದಿಂದ ಇಲ್ಲಿಯವರೆಗೆ ಸುಮಾರು 100ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ’ ಎಂದು ಶಿವನಗರ ನಿವಾಸಿ ಅಶೋಕ್ ಹೇಳುತ್ತಾರೆ.
‘ಹಂದಿಗಳು ಮನೆ ಮುಂದೆ, ರಸ್ತೆಯ ಮೇಲೆ ಸೇರಿದಂತೆ ಪಟ್ಟಣದ ಎಲ್ಲೆಂದರಲ್ಲಿ ಸಾಯುತ್ತಿವೆ. ಈ ಬಗ್ಗೆ ಪುರಸಭೆ ಗಮನಕ್ಕೂ ತಂದರೂ ತಕ್ಷಣ ಬಂದು ತೆಗೆದುಕೊಂಡು ಹೋಗದ ಕಾರಣ ದುರ್ವಾಸನೆ ಬೀರುತ್ತಿದೆ. ಹೀಗಾಗಿ ಸಂಬಂಧಪಟ್ಟವರು ಪಟ್ಟಣದಲ್ಲಿನ ಹಂದಿಗಳನ್ನು ಬೇರೆಡೆ ಸಾಗಿಸಬೇಕು’ ಎಂದು ಬಸವ ನಗರದ ನಿವಾಸಿ ಲೋಕೇಶ್ ಒತ್ತಾಯಿಸಿದರು.
‘ಪಟ್ಟಣದಲ್ಲಿ ಸಾಯುವ ಹಂದಿಗಳನ್ನು ಸಾಗಿಸಲು ಪ್ರತ್ಯೇಕ ಒಂದು ವಾಹನ ಸಿದ್ಧವಾಗಿದೆ. ಹಂದಿಗಳನ್ನು ಸಾಗಿಸುವ ಪೌರ ಕಾರ್ಮಿಕರು ದುರ್ನಾತದಿಂದ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಂದಿಗಳ ಮಾಲೀಕರ ನಿರ್ಲಕ್ಷ್ಯದಿಂದ ಅವುಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪುರಸಭೆ ಅಧಿಕಾರಿ ವರ್ಗ ಹಂದಿಗಳನ್ನು ಬೇರೆಡೆ ಸಾಗಿಸುವ ಕಾರ್ಯವನ್ನಾದರೂ ಬೇಗ ಮಾಡಬೇಕು’ ಎಂದು ಬಸವ ನಗರದ ನಿವಾಸಿ ಅಶೋಕ್ ಸೋಂಡೆ ಒತ್ತಾಯಿಸಿದ್ದಾರೆ.
ಹುಮನಾಬಾದ್ ಪಟ್ಟಣದಲ್ಲಿ ವೈಭವದಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಹೀಗಾಗಿ ಪಟ್ಟಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶದ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವ ನಡೆಯುವವರಿಗೂ ನಿತ್ಯ ಭೇಟಿ ನೀಡುತ್ತಾರೆ. ಈ ಇಂತಹ ಸಂದರ್ಭದಲ್ಲಿ ಪುರಸಭೆ ಅವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆದರೆ ಇವರ ನಿರ್ಲಕ್ಷ್ಯದಿಂದ ಹಂದಿಗಳ ಸಾವು ನಿರಂತವಾಗಿದೆ ಎಂದು ಜನರು ಅಧಿಕಾರಿಗಳ ವಿರುದ್ಧ ಹರಿಹಾಯುತ್ತಿದ್ದಾರೆ. ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಹಂದಿಗಳು ಸಾಯುತ್ತಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ್ ಅವರನ್ನು ಫೂನ್ ಮೂಲಕ ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಿಲ್ಲ.
ಪೌರಕಾರ್ಮಿಕರು ತಮ್ಮ ಸುರಕ್ಷಿತ ವಸ್ತ್ರಗಳನ್ನು ಧರಿಸದೆ ಸತ್ತ ಹಂದಿಗಳನ್ನು ಬೇರೆಡೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಸಂಬಂಧಪಟ್ಟವರು ಪೌರ ಕಾರ್ಮಿಕರಿಗೆ ಸುರಕ್ಷಿತ ವಸ್ತ್ರಗಳನ್ನು ನೀಡಬೇಕು.–ಗಣಪತಿ ಅಷ್ಟೋರೆ, ಭಾರತೀಯ ದಲಿತ ಪ್ಯಾಂಥರ್ ಅಧ್ಯಕ್ಷ
ಪಟ್ಟಣದಲ್ಲಿ ಹಂದಿಗಳು ಸಾಯುತ್ತಿರುವ ಮಾಹಿತಿ ಬಂದಿದೆ. ಸಾವಿನ ಕಾರಣ ತಿಳಿಯಲು ಪರೀಕ್ಷೆ ನಡೆಸಿ ಬೀದರಿಗೆ ಕಳುಹಿಸಲಾಗುವುದು. ಹಂದಿಯ ಮಾಲೀಕರು ಸಹಕಾರ ಮಾಡಿದರೆ ಹಂದಿಗಳಿಗೆ ವ್ಯಾಕ್ಸಿನ್ ಚಿಕಿತ್ಸೆ ನೀಡಬಹುದು.–ಡಾ.ಗೋವಿಂದ್, ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ, ಹುಮನಾಬಾದ್
ಪಟ್ಟಣದಲ್ಲಿ ಹಂದಿಗಳ ಸಾವು ನಿರಂತರವಾಗಿ ಮುಂದುವರಿದಿದೆ. ಸತ್ತ ಹಂದಿಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪ್ರತ್ಯೇಕ ಒಂದು ಸ್ಥಳ ಮಾಡಬೇಕು.–ಸವಿತಾ ಸೋಂಡೆ, ಪುರಸಭೆ ಸದಸ್ಯೆ, 19ನೇ ವಾರ್ಡ್
ಕಳೆದ ಒಂದು ವಾರದಿಂದ ಹಂದಿಗಳು ಸಾಯುತ್ತಿವೆ. ಇಲ್ಲಿಯವರೆಗೆ ಸುಮಾರ 80 ಹಂದಿಗಳು ಸತ್ತಿವೆ. ಈ ಬಗ್ಗೆ ಈಗಾಗಲೇ ಪಶುಸಂಗೋಪನಾ ಇಲಾಖೆಯವರಿಗೆ ತಿಳಿಸಲಾಗಿದೆ.–ವೀರಶೆಟ್ಟಿ, ಪುರಸಭೆ ಪರಿಸರ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.