ADVERTISEMENT

ಬೀದರ್: ಶುದ್ಧ ನೀರಿನ ಘಟಕ ಪ್ರದರ್ಶನಕ್ಕೆ ಸಿಮೀತ!

ಕಬಿರಾಬಾದವಾಡಿ ಜನರಿಗಿಲ್ಲ ಕುಡಿಯುವ ನೀರಿನ ಭಾಗ್ಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:30 IST
Last Updated 24 ಫೆಬ್ರುವರಿ 2020, 19:30 IST
ಹುಮನಾಬಾದ್ ತಾಲ್ಲೂಕಿನ ಕಬಿರಾಬಾದ್ ವಾಡಿ ಗ್ರಾಮದಲ್ಲಿ ಪ್ರಾರಂಭವಾಗದ ಶುದ್ಧ ನೀರಿನ ಘಟಕ
ಹುಮನಾಬಾದ್ ತಾಲ್ಲೂಕಿನ ಕಬಿರಾಬಾದ್ ವಾಡಿ ಗ್ರಾಮದಲ್ಲಿ ಪ್ರಾರಂಭವಾಗದ ಶುದ್ಧ ನೀರಿನ ಘಟಕ   

ಬೀದರ್: ಹುಮನಾಬಾದ್ ತಾಲ್ಲೂಕಿನ ಕಬಿರಾಬಾದವಾಡಿ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕ ಇನ್ನು ಪ್ರಾರಂಭವಾಗಿಲ್ಲ.

ಈ ಘಟಕ ಪ್ರಾರಂಭವಾದರೆ ಗ್ರಾಮದ ಎರಡು ಸಾವಿರ ಜನರಿಗೆ ಅನುಕೂಲ ಆಗಲಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವವರಿಗೆ ಬಹಳ ಅನುಕೂಲ ಆಗಲಿದೆ. ಆದ್ದರಿಂದ ನೀರಿನ ಘಟಕವನ್ನು ತಕ್ಷಣ ಆರಂಭಿಸಬೇಕು’ ಎಂದು ಜನರು ಆಗ್ರಹಿಸುತ್ತಾರೆ.

ಈ ಶುದ್ಧ ನೀರಿನ ಘಟಕದ ಕಟ್ಟಡದಲ್ಲಿ ನೀರು ಸಂಗ್ರಹಣಾ ಟ್ಯಾಂಕ್‌, ಶುದ್ಧೀಕರಣ ಉಪಕರಣಗಳ ಸಹಿತ ಲಕ್ಷಾಂತರ ರೂಪಾಯಿ ವೆಚ್ಚದ ಸಲಕರಣೆಗಳನ್ನು ಅಳವಡಿಸಲಾಗಿದೆ. ಆದರೆ ಘಟಕ ಕಾರ್ಯಾರಂಭ ಮಾಡದೆ ಅವುಗಳೆಲ್ಲ ನಿಷ್ಪ್ರಯೋಜಕವಾಗಿವೆ. ಘಟಕ ಪ್ರಾರಂಭವಾಗದ ಕಾರಣ ರಾತ್ರಿ ಸಮಯದಲ್ಲಿ ಅದು ಕುಡುಕರ ತಾಣವಾಗಿ ಮಾರ್ಪಟ್ಟಿದೆ’ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ADVERTISEMENT

ಸರ್ಕಾರ ಇಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದು ಕಣ್ಣು ಮುಚ್ಚಿ ಕುಳಿತುಕೊಂಡಿದೆ. ಇನ್ನು ಅಧಿಕಾರಿಗಳು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ಬೇಕಾಬಿಟ್ಟಿ ಹಣ ಖರ್ಚು ಮಾಡಿ ಘಟಕಗಳನ್ನು ಸ್ಥಾಪಿಸಿದ್ದಾರೆ. ಅಲ್ಲದೆ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಾ ಹಣ ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಘಟಕ ಪ್ರಾರಂಭಿಸಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.