ಬೀದರ್: ‘ಮನುಷ್ಯ ನೀರು, ಗಾಳಿ ಶುದ್ಧ ಮಾಡುವ ವಿದ್ಯೆ ಕಲಿತ. ಆದರೆ, ತನ್ನೊಳಗಿನ ಅವಗುಣಗಳನ್ನು ಶುದ್ಧಿಕರಿಸುವುದು ಮರೆತ. ಅಂತರಂಗ, ಬಹಿರಂಗ ಶುದ್ಧವಾಗಿಡುವುದು ಬಹಳ ಮುಖ್ಯ’ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕೊಳಾರ (ಕೆ) ಸಮೀಪದ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಬುಧವಾರ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜೀವನಕ್ಕೆ ಅರ್ಥ, ಶ್ರೇಯಸ್ಸು ಬರಬೇಕಾದರೆ ಅಂತರಂಗ, ಬಹಿರಂಗ ಎರಡೂ ಶುದ್ಧವಾಗಿರಬೇಕು. ಮನುಷ್ಯನ ಬುದ್ಧಿ ವಿಕಾಸಗೊಂಡಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಸ್ವಾರ್ಥ ಮತ್ತು ಸಂಕುಚಿತ ಮನೋಭಾವದಿಂದ ಜೀವನದಲ್ಲಿ ನೆಮ್ಮದಿ ಕಾಣುತ್ತಿಲ್ಲ. ಸ್ವಾರ್ಥವಿಲ್ಲದ ಬದುಕು ಸರ್ವ ಕಾಲಕ್ಕೂ ಶ್ರೇಷ್ಠವಾದುದು ಎಂದು ಹೇಳಿದರು.
ಕಷ್ಟ ಬಂದಾಗ ಕಲ್ಲಿನಂತೆ ಗಟ್ಟಿಯಾಗಿರಬೇಕು. ಸುಖ ಬಂದಾಗ ಹೂವಿನಂತೆ ಮೃದುವಾಗಿರಬೇಕು. ಜಗತ್ತಿನ ಎಲ್ಲ ಧರ್ಮಗಳು ಶಾಂತಿ, ಸಾಮರಸ್ಯವನ್ನೇ ಹೇಳುತ್ತವೆ ಹೊರತು ಸಂಘರ್ಷವಲ್ಲ. ಜ್ಞಾನದ ಕೊರತೆಯಿಂದಾಗಿ ಮನುಷ್ಯನ ಬದುಕು ದಿಕ್ಕು ತಪ್ಪಿ ಹೋಗುತ್ತಿದೆ ಎಂದರು.
ತಮಲೂರು ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದಲ್ಲಿರುವ ಆದರ್ಶ ಮೌಲ್ಯಗಳನ್ನು ಅರಿತು ಆಚರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ ಮಾತನಾಡಿ, ಹಿಂದೂ ಸಂಸ್ಕೃತಿಯ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಹಿಂದೂ ಸಮಾಜ ಒಗ್ಗಟ್ಟಿನಿಂದ ದೇಶದ ಭದ್ರತೆ ಮತ್ತು ಸಾಮರಸ್ಯ ಸೌಹಾರ್ದ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಹುಡುಗಿ ಹಿರೇಮಠದ ವಿರೂಪಾಕ್ಷ ಲಿಂಗ ಶಿವಾಚಾರ್ಯರು, ಮೇಹಕರ, ತಡೋಳಾ ಹಾಗೂ ಡೋಣಗಾಪುರ ಶ್ರೀಮಠಗಳ ಸ್ವಾಮೀಜಿಗಳು ಹಾಜರಿದ್ದರು. ಬಸವರಾಜ ದೇಶಮುಖ, ಮಾರುತಿ ಪಂಚಬಾಯಿ, ಶಿವಶರಣಪ್ಪ ಸೀರಿ, ಗುರುರಾಜ ಮೋಳಕೇರಿ, ಜಗದ್ಗುರು ಪಂಚಾಚಾರ್ಯ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಖಜಾಂಚಿ ಶ್ರೀಕಾಂತ ಸ್ವಾಮಿ ಸೋಲಪೂರ, ಕಾರ್ತಿಕ ಮಠಪತಿ ಹಾಜರಿದ್ದರು. ಪುಣ್ಯಾಶ್ರಮದ ಸಂಚಾಲಕ ಷಣ್ಮುಖಯ್ಯ-ತೇಜಮ್ಮ ದಂಪತಿಯನ್ನು ಸತ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.